ಬೀದರ್-ಬೆಂಗಳೂರು ವಿಮಾನ ಸೇವೆಗೆ ಸಿಎಂ ಬಿಎಸ್‌ವೈ ಹಸಿರು ನಿಶಾನೆ

ಬೀದರ್, ಫೆ.7: ಬೀದರನಿಂದ ಬೆಂಗಳೂರಿಗೆ ಹಾರಲಿರುವ ಲೋಹದ ಹಕ್ಕಿ ಬೀದರ್ ನಾಗರಿಕ ವಿಮಾನಯಾನ ಸೇವೆಯನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇಂದು ಲೋಕಾರ್ಪಣೆಗೊಳಿಸಿದರು.
ಸಂಸದರಾದ ಭಗವಂತ ಖೂಬಾ ಹಾಗೂ ಬೀದರ್ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇನ್ನಿತರ ಗಣ್ಯರೊಂದಿಗೆ ಬೆಂಗಳೂರಿನ ಎಚ್‌ಎಎಲ್ ಅಂತರ್‌ರಾಷ್ಟ್ರೀಯ ವಿಮಾನ ಲ್ದಾಣದಿಂದ ಬೆಳಗ್ಗೆ 9.50ಕ್ಕೆ 72 ಆಸನಗಳುಳ್ಳ ಟ್ರುಜೆಟ್ ವಿಮಾನದಲ್ಲೇ ಬೀದರ್‌ಗೆ ಆಗಮಿಸುವ ಮೂಲಕ ಬೀದರ್-ಬೆಂಗಳೂರು ವಿಮಾನಯಾನ ಸಾಧ್ಯವಾಗಿಸಿದ ಮುಖ್ಯಮಂತ್ರಿ ಅವರಿಗೆ ಪಶು ಸಂಗೋಪಣೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ ಹಜ್ ಸಚಿವರು ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹಾಗೂ ಬೀದರ್ ನ ಗಣ್ಯರು, ನಾಗರಿಕರು ಬೀದರ ವಾಯುನೆಲೆಯಲ್ಲಿ ಹಾರ್ದಿಕವಾಗಿ ಸ್ವಾಗತ ಕೋರಿದರು.
ಬಳಿಕ ಚಿದ್ರಿಯ ಬೀದರ ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಈ ವಿಮಾನಯಾನ ಸೇವೆಯ ಮೂಲಕ ಇನ್ಮುಂದೆ ಬೀದರ್ ಪಟ್ಟಣವು ಬೆಂಗಳೂರಿಗೆ ಸಮೀಪವಾಗಿದೆ. ಇಂತಹ ಸೇವೆಯಿಂದ ಕೈಗಾರಿಕೆಗಳು ಈ ಭಾಗಕ್ಕೆ ಬರಲು ಅನುಕೂಲವಾಗಲಿದೆ. ಬೀದರ್ ಜಿಲ್ಲೆಯ ಜನರ ಅಪೇಕ್ಷೆಯಂತೆ ರಾಜ್ಯ ಸರಕಾರವು ವಿಮಾನಯಾನಕ್ಕೆ ಬೇಕಾಗುವ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಬೀದರ್-ಬೆಂಗಳೂರು ವಿಮಾನ ಸಂಚಾರದ ಸಮಯದ ನಿಗದಿಗೆ ಸಂಬಂಧಿಸಿದಂತೆ ನೀಡಿದ ಸಲಹೆ ಅತ್ಯಂತ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಐತಿಹಾಸಿಕ ದಿನವಿದು: ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಮಾತನಾಡಿ, ಬೀದರ-ಬೆಂಗಳೂರು ವಿಮಾನಯಾನ ಇಂದಿನಿಂದ ಆರಂಭಗೊಂಡಿದ್ದು ಬೀದರ್ ಇತಿಹಾಸದಲ್ಲಿ ಬರೆದಿಡುವ ಐತಿಹಾಸಿಕ ಸಾಧನೆಯಾಗಿದೆ. ಸಂಸದರು ಮತ್ತು ಬೀದರ ಜಿಲ್ಲೆಯ ಜನರ ಸಹಕಾರದಿಂದ ಅತ್ಯಲ್ಪ ಅವಧಿಯಲ್ಲಿ ಈ ವಿಮಾನಯಾನ ಸೇವೆಯು ಸಾಧ್ಯವಾಗಿದ್ದಕ್ಕೆ ಸಂತಸವಾಗಿದೆ ಎಂದು ತಿಳಿಸಿದರು. ಬೀದರ್ ನಿಂದ ಬೆಂಗಳೂರಿಗೆ ಹೋಗಿ ಬರಲು ಜನತೆಗೆ ಅನುಕೂಲವಾಗುವ ಹಾಗೆ ವಿಮಾನ ಹಾರಾಟದ ಸಮಯ ನಿಗದಿಪಡಿಸಬೇಕು ಎಂದು ಸಚಿವರಾದ ಚವ್ಹಾಣ್ ಅವರು ಕೋರಿದರು.
ಸಂಪರ್ಕ ಕ್ರಾಂತಿಯ ಪರ್ವ: ಸಂಸದರಾದ ಭಗವಂತ ಖೂಬಾ ಮಾತನಾಡಿ, ಬೀದರನ ಎಲ್ಲ ಜನರ ಮೊಗದಲ್ಲಿ ಈ ವಿಮಾನ ಹಾರಾಟದಿಂದ ಸಂತಸ ಕಾಣುತ್ತಿದೆ. ಎಲ್ಲ ಅಡೆತಡೆಗಳು ನಿವಾರಣೆಯಾಗಿ ಇಂದು ಲೋಹದ ಹಕ್ಕಿ ಹಾರುತ್ತಿದೆ. 2008ರಲ್ಲಿ ಕಂಡ ಕನಸು ಇಂದು ನನಸಾಗಿದೆ. ಹೀಗಾಗಿ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ವಿಮಾನ ಹಾರಾಟದ ಈ ಪ್ರಯತ್ನವು ಸಂಪರ್ಕ ಕ್ರಾಂತಿಯ ಪರ್ವ ಎಂದು ಖೂಬಾ ಅವರು ಬಣ್ಣಿಸಿದರು.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪೀಲ್ ಮೋಹನ್ ಮಾತನಾಡಿ, ಬೀದರ್-ಬೆಂಗಳೂರು ವಿಮಾನ ಆರಂಭ ಈ ಭಾಗದ ಹೆಮ್ಮೆಯ ಸಂಗತಿ. ಇಲ್ಲಿನ ಸಮಗ್ರ ಅಭಿವೃದ್ಧಿಯ ಮೆಟ್ಟಿಲಿಗೆ ತಳಪಾಯವಾದಂತಾಯಿತು ಎಂದು ತಿಳಿಸಿದರು.
ಶಾಸಕರಾದ ರಹೀಂ ಖಾನ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತ ಚಿದ್ರಿ, ಶಾಸಕರಾದ ಈಶ್ವರ.ಬಿ.ಖಂಡ್ರೆ, ರಾಜಶೇಖರ.ಬಿ.ಪಾಟೀಲ, ಬಿ.ನಾರಾಯಣರಾವ್, ಬಂಡೆಪ್ಪ ಕಾಶೆಂಪೂರ್, ಚಿಂಚೋಳಿ ವಿಧಾನಸಭೆ ಸದಸ್ಯರಾದ ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿಯದ ಅಧ್ಯಕ್ಷರಾದ ಕೆ.ರತ್ನಪ್ರಭ, ಕೆಎಸ್ ಐಐಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಗಂಗಾ ರಾಮ್ ಬಡೇರಿಯಾ, ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಸುಬೋಧ್ ಯಾದವ್, ಜಿಎಂಆರ್ ಹಾಗೂ ಟ್ರೂಜೆಟ್ ಅಧಿಕಾರಿಗಳು ಇದ್ದರು.







