ಬಿಜೆಪಿ ಸೇರಿರುವ ನಾವೆಲ್ಲರೂ ತಬ್ಬಿಕೊಂಡು ಇರಲು ಸಾಧ್ಯವೇ: ಎಚ್.ವಿಶ್ವನಾಥ್ ಕಿಡಿ

ಮೈಸೂರು,ಫೆ.7: ಬಿಜೆಪಿ ಸೇರಿರುವ ನಾವೆಲ್ಲರೂ ಯಾವಾಗಲು ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ ?ಗಂಡ ಹೆಂಡತಿಯೇ ಜೊತೆಯಾಗಿ ಇರುವುದಿಲ್ಲ, ನಾವು ಯಾವಾಗಲೂ ಜೊತೆಯಾಗೆ ಇರಲು ಆಗುತ್ತಾ ಎಂದು ಮಾಜಿ ಸಚಿವ ಎಚ್.ವಿಶ್ವನಾರ್ಥ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಿಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವರು ಬರದೇ ಇರಬಹುದು. ಬರದವರನ್ನು ನೀವು ಕೇಳಿ. ಆದರೆ ನಾವೆಲ್ಲ ಒಟ್ಟಾಗಿ ಇದ್ದೇವೆ, ಸಿಗೋದಕ್ಕೆ ಆಗಿಲ್ಲ ಅಷ್ಟೇ. ನಿನ್ನೆ ನಾನು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ನಿನ್ನೆ ಕಾರ್ಯಕ್ರಮ ಚೆನ್ನಾಗಿ ಆಯಿತು. ನನ್ನ ಅನುಭವ ಬಳಸಿಕೊಳ್ಳಿ ಅಂತ ಕೂಗಿ ಹೇಳೋಕೆ ಆಗಲ್ಲ. ಮಂತ್ರಿಯಾಗಿರಲಿ ಆಗದೆ ಇರಲಿ, ಅನುಭವಸ್ಥರ ಅನುಭವ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಂತ್ರಿಗಳನ್ನು ಅನರ್ಹರೆಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಎಚ್.ವಿಶ್ವನಾಥ್, ಸಿದ್ದರಾಮಯ್ಯರಿಂದ ಸಂವಿಧಾನಕ್ಕೆ ಅಪಚಾರ ಆಗಿದೆ. ಸಿದ್ದರಾಮಯ್ಯ ಸಂವಿಧಾನಕ್ಕೆ ಗೌರವ ಕೊಡ್ತಿದ್ದಾರೋ ಅಥವಾ ಅಗೌರವ ಕೊಡ್ತಿದ್ದಾರೋ. ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರನ್ನು ನೀವು ಹೇಗೆ ಗೆದ್ದಿದ್ದೀರಿ ನನಗೆ ಗೊತ್ತಿದೆ ಅಂದರೆ ಏನರ್ಥ. ಹಾಗಾದರೆ ಇವರು ಹೇಗೆ ಗೆದ್ದರು. ಎಲ್ಲ ಎಲೆಕ್ಷನ್‍ಗಳು ದುಡ್ಡಿನಿಂದಲೇ ಆಗುತ್ತಾ ಎಂದು ಪ್ರಶ್ನಿಸಿದರು.
ಸಂವಿಧಾನ ಅಪಾಯದಲ್ಲಿದೆ ಎಂದು ಭಾಷಣ ಮಾಡುವ ಸಿದ್ದರಾಮಯ್ಯರೇ ಸಂವಿಧಾನಕ್ಕೆ ಅಗೌರವ ಕೊಡುತ್ತಿದ್ದಾರೆ. ಹಾಗಾದರೆ ಸುಪ್ರೀಂ ಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಗೌರವ ಕೊಡುತ್ತಿಲ್ಲ ಅಂತ ಅರ್ಥ. ಸಿದ್ದರಾಮಯ್ಯನವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.







