ಯುಜಿಸಿ ಮಾನದಂಡ ಪಾಲಿಸದವರಿಗೆ ಕಾಲೇಜು ತೆರೆಯಲು ಅನುಮತಿಯಿಲ್ಲ: ಡಾ.ಅಶ್ವಥ್ ನಾರಾಯಣ

ಬೆಂಗಳೂರು, ಫೆ.7: ಯುಜಿಸಿ ಮಾನದಂಡಗಳ ಅನ್ವಯ ಕನಿಷ್ಠ ಮೂಲಸೌಲಭ್ಯಗಳಿಲ್ಲದ ಸಂಸ್ಥೆಗಳಿಗೆ ಕಾಲೇಜು ತೆರೆಯಲು ಶಿಫಾರಸ್ಸು ಮಾಡಿದರೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಿಜಿಸ್ಟ್ರಾರ್ ಅವರನ್ನು ನೇರವಾಗಿ ಹೊಣೆಗಾರರನ್ನಾಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಎಚ್ಚರಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಆಯೋಜಿಸಲಾಗಿದ್ದ ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಿಗೆ ಸರಕಾರದ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು ಎಂಬ ಕಾರಣಕ್ಕೆ ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತೆ ನೀಡಲಾಗುತ್ತದೆ. ಆದರೆ, ಕೊಟ್ಟಂತಹ ಅಧಿಕಾರ ಪ್ರಯೋಜನ ಆಗದಿದ್ದರೆ ಅದನ್ನು ವಾಪಸ್ ಪಡೆಯಬಹುದು ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯಗಳಿಗೆ ನಮ್ಮ ಸರಕಾರದಿಂದ ಹೆಚ್ಚಿನ ಸ್ವಾತಂತ್ರ್ಯ ಕೊಡಲಾಗಿದೆ. ಇಂಥ ಸ್ವಾತಂತ್ರ್ಯ ಮತ್ತು ಅಧಿಕಾರವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಒಂದು ವೇಳೆ ಕೊಟ್ಟ ಅಧಿಕಾರ ಪ್ರಯೋಜನ ಆಗದಿದ್ದರೆ ಅದನ್ನು ವಾಪಸ್ ಕೂಡ ತೆಗೆದುಕೊಳ್ಳಬಹುದು ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಇಡೀ ಸಮಾಜದ ವ್ಯವಸ್ಥೆಯನ್ನು ಸರಿಪಡಿಸುವಂಥ ಮಹತ್ತರವಾದ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ. ಇಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಸಮಾಜ ಸೃಷ್ಟಿಸಲು ಸಾಧ್ಯ. ಈ ಜವಾಬ್ದಾರಿಯನ್ನು ಅರಿತು ಎಲ್ಲರೂ ಕೆಲಸ ಮಾಡಿದಾಗ ಉತ್ತಮ ವ್ಯವಸ್ಥೆ ನಿರ್ಮಿಸಬಹುದು. ಅಧಿಕಾರದ ದರ್ಪ ತೋರಿಸಲು ದೊಡ್ಡ ಹುದ್ದೆಗಳಲ್ಲಿ ಇರುವ ಅಗತ್ಯ ಇಲ್ಲ. ಒಳ್ಳೆಯ ಗುಣ ಬೆಳೆಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ನೇಮಕದಲ್ಲಿ ಪಾರದರ್ಶಕತೆ: ವಿಶ್ವವಿದ್ಯಾಲಯಗಳಲ್ಲಿ ಕೇವಲ ಲಿಖಿತ ಪರೀಕ್ಷೆ ಮೂಲಕ ನೇಮಕ ಆಗುತ್ತಿದೆ. ಪಾರದರ್ಶಕತೆ ಕಾಯ್ದುಕೊಳ್ಳುತ್ತಿದ್ದೇವೆ. ಯುಜಿಸಿ ಮಾನದಂಡದ ಪ್ರಕಾರ ಅರ್ಜಿದಾರರ ಅರ್ಜಿಯನ್ನು ಪರಿಶೀಲಿಸಿ, ಮೌಲ್ಯಮಾಪನ ನಡೆಸಿ, ವಿವಿ ಮಟ್ಟದಲ್ಲೆ ನೇಮಕ ಆಗುವುದು. ಪರೀಕ್ಷಾ ಪ್ರಾಧಿಕಾರದಿಂದ ಯಾವುದೇ ಪರೀಕ್ಷೆ ಅಥವಾ ಸಂದರ್ಶನ ನಡೆಸುವುದಿಲ್ಲ. ಅರ್ಜಿಗಳನ್ನು ವಿಶ್ಲೇಷಿಸಿ 1:3 ಅನುಪಾತದಲ್ಲಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಯುವುದು ಎಂದು ಅವರು ಸ್ಪಷ್ಟಪಡಿಸಿದರು.
ಆನ್‌ಲೈನ್ ವ್ಯವಸ್ಥೆಗೆ ಒತ್ತು: ಸಿಂಡಿಕೇಟ್ ಸಭೆ ವ್ಯವಸ್ಥಿತವಾಗಿ ರೂಪಿಸಬೇಕು. ಇಲ್ಲಿ ಮುಚ್ಚುಮರೆ ಬೇಡ. ಕುಲಪತಿಗಳ ಗೌರವ ಬಹಳ ಎತ್ತರದಲ್ಲಿದೆ. ಉತ್ತರದಾಯಿತ್ವ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಹುದ್ದೆಯ ಘನತೆಯನ್ನು ಹೆಚ್ಚಿಸಬೇಕು. ಎಲ್ಲ ವಿಶ್ವವಿದ್ಯಾಲಯಗಳನ್ನು ಒಂದೇ ವೇದಿಕೆಯಡಿ ತಂದು ಉತ್ತರದಾಯಿತ್ವ ಮತ್ತು ಪಾರದರ್ಶಕತೆ ತರಲು ತೀರ್ಮಾನಿಸಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ರಾಜ್ಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಂಥ ಸಂದರ್ಭದಲ್ಲೂ ಕಡತಗಳಲ್ಲಿ ಕಾರ್ಯ ನಿರ್ವಹಿಸುವುದು ಸರಿಯಲ್ಲ. ವಿಶ್ವವಿದ್ಯಾಲಯಗಳ ಎಲ್ಲ ಕೆಲಸ, ಶಿಫಾರಸ್ಸುಗಳು ಆನ್‌ಲೈನ್ ಮೂಲಕವೇ ನಡೆಯಬೇಕು ಎಂದು ಅಶ್ವಥ್ ನಾರಾಯಣ ತಾಕೀತು ಮಾಡಿದರು.
ಯುವ ಸಬಲೀಕರಣ ಕೇಂದ್ರ: ನಮ್ಮ ಸರಕಾರ ಆರಂಭಿಸಿರುವ ಯುವ ಸಬಲೀಕರಣ ಕೇಂದ್ರದ ಮೂಲಕ ಪ್ರತಿ ಶಾಲೆಯಲ್ಲೂ ಒಬ್ಬ ಸಮಾಲೋಚಕರನ್ನು ನೇಮಿಸಿಕೊಳ್ಳಲಾಗುವುದು. ಪ್ರೌಢಶಾಲೆ ಮಟ್ಟದಲ್ಲೆ ಮುಂದಿನ ಓದು, ಕೌಶಲ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.
ಇಂಟರ್ನ್‌ಶಿಪ್, ಅಪ್ರೆಂಟಿಶಿಪ್, ಪ್ರಾಜೆಕ್ಟ್ ಹಾಗೂ ಮುಂದಿನ ವೃತ್ತಿ ಜೀವನದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಗುತ್ತಿದೆ. ಪದವಿ ಮುಗಿಸಿ ಕೆಲಸ ಹುಡುಕುವ ಬದಲು, ವಿದ್ಯಾರ್ಥಿ ದೆಸೆಯಲ್ಲಿ ಮುಂದಿನ ಉದ್ಯೋಗಕ್ಕೆ ಅಗತ್ಯ ಕೌಶಲ್ಯ ಕಲಿಯುಲು ಅವಕಾಶ ಕಲ್ಪಿಸಲಾಗಿದೆ ಎಂದು ಅಶ್ವಥ್ ನಾರಾಯಣ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎ.ಕೋರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







