ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್ ಜಯಂತಿ ಆಚರಣೆ

ಬೆಂಗಳೂರು, ಫೆ.7: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅನುಯಾಯಿಯಾಗಿದ್ದ ‘ಗಡಿನಾಡ ಗಾಂಧಿ’ ಎಂದೇ ಪ್ರಖ್ಯಾತರಾಗಿದ್ದ ಸ್ವಾತಂತ್ರ ಹೋರಾಟಗಾರ, ‘ಭಾರತ ರತ್ನ’ ಖಾನ್ ಅಬ್ದುಲ್ ಗಫ್ಫಾರ್ ಖಾನ್ ಅವರ ಜಯಂತಿಯನ್ನು ಬೆಂಗಳೂರು ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನಗರದ ಗುರ್ರಪ್ಪನಪಾಳ್ಯದಲ್ಲಿ ಆಚರಿಸಲಾಯಿತು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಿಎಎ ಹಾಗೂ ಎನ್‌ಆರ್‌ಸಿಯನ್ನು ಜಾರಿಗೆ ತರಲು ಮುಂದಾಗುತ್ತಿರುವುದರಿಂದ, ಖಾನ್ ಅಬ್ದುಲ್ ಗಫ್ಫಾರ್ ಖಾನ್ ಅವರಂತಹ ಮಹಾನ್ ಪುರುಷರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು ಎಂದು ಬೆಂಗಳೂರು ಯೂತ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಮಾಸ್ತಿ ಝಾಕಿರ್ ಅಲಿಖಾನ್ ಹೇಳಿದರು.
ಅಫ್ಘಾನಿಸ್ತಾನದ ಗಡಿಭಾಗದಲ್ಲಿರುವ ಖೈಬರ್ ಕಣಿವೆಯಲ್ಲಿರುವ ಬೆಟ್ಟ ಗುಡ್ಡಗಳನ್ನು ನೋಡಿದ ಬ್ರಿಟಿಷ್ ಅಧಿಕಾರಿ ಮೊಲ್ಸ್ ವರ್ಥ್ ಎಂಬುವವರು, ಈ ನಾಡಿನಲ್ಲಿರುವ ಎಲ್ಲ ಬೆಟ್ಟಗುಡ್ಡಗಳು ರಕ್ತದಲ್ಲಿ ಮಿಂದೆದ್ದಿವೆ ಎಂದಿದ್ದರು. ಅಂತಹ ನಾಡಿನಿಂದ ಬಂದ ಖಾನ್ ಅಬ್ದುಲ್ ಗಫ್ಫಾರ್ ಖಾನ್, ಗಾಂಧೀಜಿ ಪ್ರತಿಪಾದಿಸುತ್ತಿದ್ದ ಅಹಿಂಸಾವಾದದ ಪ್ರಬಲ ಪ್ರತಿಪಾದಕರಾಗಿದ್ದರು ಎಂದು ಅವರು ಹೇಳಿದರು.
ಖುದಾಯಿ ಖಿದ್ಮತ್‌ಗಾರ್(ದೇವರ ಸೇವಕರು) ಎಂಬ ಸಂಘಟನೆಯನ್ನು ಕಟ್ಟಿಕೊಂಡು ಭಾರತದ ಸ್ವಾತಂತ್ರ ಹೋರಾಟಕ್ಕೆ ಕಹಳೆ ಊದಿದ ಮಹಾನ್ ಪುರುಷರ ಪೈಕಿ ಒಬ್ಬರಾಗಿದ್ದಾರೆ. 1987ರಲ್ಲಿ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಸನ್ಮಾನ ‘ಭಾರತ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಇಂತಹ ಮಹಾನ್ ಚೇತನಗಳ ಬಗ್ಗೆ ಇಂದಿನ ಯುವ ಪೀಳಿಗೆ ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ನಿವೃತ್ತ ನ್ಯಾ.ಗೋಪಾಲ್‌ಗೌಡ, ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್. ಪ್ರೊ.ರವಿವರ್ಮ ಕುಮಾರ್, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಸೇರಿದಂತೆ ಅನೇಕ ವಿದ್ಯಾರ್ಥಿ ಸಂಘಟನೆಗಳು, ಯುವಕರ ಸಂಘಟನೆಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಲಕ್ಷಾಂತರ ಜನ ಬೀದಿಗಿಳಿದು ಪ್ರತಿನಿತ್ಯ ಹೋರಾಟಗಳನ್ನು ಮಾಡುತ್ತಿದ್ದಾರೆ. ಇನ್ನಾದರೂ ಕೇಂದ್ರ ಸರಕಾರ ಎಚ್ಚೆತ್ತುಕೊಂಡು, ಈ ವಿವಾದಿತ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಅನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಅಹಿಂಸಾ ತತ್ವ, ಸತ್ಯ, ನ್ಯಾಯ ಹಾಗೂ ಧರ್ಮದ ಎದುರು ಜಗತ್ತಿನ ಯಾವ ಸರ್ವಾಧಿಕಾರಿ ಶಕ್ತಿಯೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಜಗತ್ತಿನಲ್ಲೆ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇನ್ನಾದರೂ ತಮ್ಮ ಸ್ವಾರ್ಥಕ್ಕಾಗಿ ಈ ಯೋಜನೆ ಜಾರಿಗೆ ತರುವುದನ್ನು ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು.







