ಫೆ.9: ಡಾ.ಎ.ಸುಬ್ಬರಾವ್ ಜನ್ಮ ಶತಾಬ್ದಿ ಆಚರಣೆಯ ಸಮಾರೋಪ

ಮಂಜೇಶ್ವರ, ಫೆ.8: ಸ್ವಾತಂತ್ರ ಹೋರಾಟಗಾರ, ಉತ್ತರ ಮಲಬಾರಿನಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ರಾಜ್ಯಸಭಾ ಮಾಜಿ ಸದಸ್ಯ, ಮಾಜಿ ಸಚಿವ ಡಾ.ಎ. ಸುಬ್ಬರಾವ್ ಅವರ ಜನ್ಮಶತಾಬ್ದಿ ಆಚರಣೆಯ ಸಮಾರೋಪ ಸಮಾರಂಭವು ಫೆ.9ರಂದು ಅಪರಾಹ್ನ 3:30ಕ್ಕೆ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಂಘಟಕ ಸಮಿತಿಯ ಅಧ್ಯಕ್ಷ ಬಿ.ವಿ.ರಾಜನ್, ಸಿಪಿಐ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಪನ್ಯನ್ ರವೀಂದ್ರನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇರಳ ಕಂದಾಯ ಸಚಿವ ಇ ಚಂದ್ರಶೇಖರ್ ಹಾಗೂ ಸಿಪಿಐ ರಾಜ್ಯ ಸಮಿತಿಯ ಅಧ್ಯಕ್ಷ ಸಿ.ಪಿ.ಮುರಳಿ ಅವರು ಸುಬ್ಬರಾವ್ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಈ ಸಂದರ್ಭ ಡಾ.ಬನಾರಿ ರಚಿಸಿದ ‘ಶತಮಾನ ಶ್ರದ್ಧಾಂಜಲಿ’ ಎಂಬ ಕವಿತೆಯ ಬಿಡುಗಡೆ ಹಾಗೂ ವಾಚನ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಬೇವಿನಕೊಪ್ಪದ ನಿತ್ಯಾನಂದ ಧ್ಯಾನ ಮಂದಿರದ ಶ್ರೀ ವಿಜಯಾನಂದ ಸ್ವಾಮೀಜಿ ಸುಬ್ಬರಾವ್ ಅವರ ಜೀವನ ರೀತಿಯ ಅಪೂರ್ವ ಘಟನೆಗಳನ್ನು ಸ್ಮರಿಸಿ ಮಾತನಾಡಲಿದ್ದಾರೆ. ಇದೇ ಸಂದರ್ಭ ಮಂಜೇಶ್ವರದ ಕೇಶವ ಇಡ್ಯರಿಗೆ ಸನ್ಮಾನ ಹಾಗೂ ಅವರ ತಂಡಕ್ಕೆ ಗೌರಾರ್ಪಣೆ ನಡೆಯಲಿದೆ. ಬಳಿಕ ಇಂಚರ ತಂಡದ ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
ವೇದಿಕೆಯಲ್ಲಿ ನೇತಾರರಾದ ಗೋವಿಂದನ್ ಪಳ್ಳಿಕಾಪಿಲ್, ಟಿ.ಕೃಷ್ಣನ್, ಬಂಗಳಂ ಪಿ.ಕುಂಞಿ ಕೃಷ್ಣನ್, ಕೆ.ವಿ.ಕೃಷ್ಣನ್, ಭಾರ್ಗವಿ ವಿಜಯ ಕುಮಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸುದ್ದಿಗೋಷ್ಠಿಯಲ್ಲಿ ಜಯರಾಂ ಬಲ್ಲಂಗುಡೇಲ್, ಅಜಿತ್ ಎಂ.ಸಿ., ರಾಮಕೃಷ್ಣ ಕಡಂಬಾರ್, ಮುಸ್ತಫ ಎಂ.ಡಿ. ಉಪಸ್ಥಿತರಿದ್ದರು.







