ದೇಶದ ಹಿತಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಿ: ಎನ್.ವಿನಯ ಹೆಗ್ಡೆ
ಎಬಿವಿಪಿ ರಾಜ್ಯ ಸಮ್ಮೇಳನದ 2ನೇ ದಿನ

ಮಂಗಳೂರು, ಫೆ.8: ದೇಶದ ಹಿತಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಲು ಯುವಕರು ಮುಂದೆ ಬರಬೇಕಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.ವಿನಯ ಹೆಗ್ಡೆ ಕರೆ ನೀಡಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಸಮಿತಿಯ ವತಿಯಿಂದ ನಡೆಯುತ್ತಿರುವ 39ನೇ ಎಬಿವಿಪಿ ರಾಜ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಧರ್ಮ, ನಂಬಿಕೆಗಳೊಂದಿಗೆ ನಾವು ಇತರರಿಗೆ ತೊಂದರೆಯುಂಟು ಮಾಡದೆ ಬದುಕುವುದರ ಜೊತೆಗೆ ದೇಶ ಪ್ರೇಮವನ್ನು ತೋರಿಸಬೇಕಾಗಿದೆ. ದೇಶದ ಒಳಿತಿಗಾಗಿ ನಾವು ಸಮರ್ಪಣಾ ಭಾವದಿಂದ ಪ್ರಾಣತ್ಯಾಗಕ್ಕೂ ಸಿದ್ಧರಾಗುವ ಆದರ್ಶ ನಮ್ಮ ಮುಂದಿರಬೇಕಾಗಿದೆ ಎಂದರು.
‘ವರ್ತಮಾನ ಭಾರತ’ ಎಂಬ ವಿಷಯದ ಬಗ್ಗೆ ವಿಶೇಷ ಭಾಷಣ ಮಾಡಿದ ಎಬಿವಿಪಿಯ ನಿಕಟ ಪೂರ್ವ ಸಂಘಟನಾ ಕಾರ್ಯದರ್ಶಿ ಸುನೀಲ್ ಅಂಬೇಕರ್, ದೇಶದಲ್ಲಿ ಜಾರಿಗೆ ತರಲುದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಲ್ಲಿ ಸಕಾರಾತ್ಮಕವಾದ ಬದಲಾವಣೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಎಬಿವಿಪಿ ಸ್ವಾಗತಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲೂ ಸಮಾನತೆ ತರಬೇಕೆನ್ನುವ ನಿಟ್ಟಿನಲ್ಲಿ ನೀಟ್ ಜಾರಿಗೆ ಬಂದಿರುವುದು ಎಬಿವಿಪಿಯ ಪ್ರಯತ್ನದ ಫಲವಾಗಿದೆ ಎಂದು ತಿಳಿಸಿದರು.
ಎಬಿವಿಪಿ ಮಹಿಳಾ ಸುರಕ್ಷತೆ ಮತ್ತು ಸಶಕ್ತತೆಯ ದೃಷ್ಟಿಯಿಂದ 20 ವರ್ಷದೊಳಗಿನ ದೇಶಾದ್ಯಂತ ಸುಮಾರು 8 ಲಕ್ಷ ಜನರಿಗೆ ತರಬೇತಿ ನೀಡಿದೆ ಮುಂದಿನ ದಿನಗಳಲ್ಲಿ 20 ವರ್ಷದೊಳಗಿನ ಎಲ್ಲಾ ಯುವತಿಯರಿಗೂ ಮಹಿಳಾ ಸಶಕ್ತತೆಯ ತರಬೇತಿ ನೀಡುವ ಗುರಿ ಇದೆ ಎಂದು ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಎಬಿವಿಪಿ ರಾಜ್ಯಾಧ್ಯಕ್ಷ ವೀರೇಶ್ ಬಾಳೆಕಾಯಿ, ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ, ಬೆಂಗಳೂರು ನಗರ ಕಾರ್ಯದರ್ಶಿ ಸೂರಜ್ ಪಂಡಿತ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತೀಶ್ ಕಾರ್ಯಕ್ರಮ ನಿರೂಪಿಸಿದರು.






.gif)
.gif)
.gif)
.gif)

