ಕೊರೋನ ವೈರಸ್ ಭೀತಿ : ಜಪಾನಿನಲ್ಲಿ ನಿರ್ಬಂಧಿಸಲ್ಪಟ್ಟಿರುವ ಹಡಗಿನಲ್ಲಿ 200ಕ್ಕೂ ಅಧಿಕ ಭಾರತೀಯರು ಅತಂತ್ರ

ಹೊಸದಿಲ್ಲಿ,ಫೆ.8: ಜಪಾನಿನ ಯೋಕೊಹಾಮಾ ಬಂದರಿನ ಸಮೀಪ ಸಮುದ್ರದಲ್ಲಿ ನಿರ್ಬಂಧದಲ್ಲಿರಿಸಲಾಗಿರುವ ‘ಡೈಮಂಡ್ ಪ್ರಿನ್ಸೆಸ್ ’ಐಷಾರಾಮಿ ಪ್ರವಾಸಿ ಹಡಗಿನಲ್ಲಿರುವ 3700ಕ್ಕೂ ಅಧಿಕ ಜನರಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸೇರಿದಂತೆ 200ಕ್ಕೂ ಅಧಿಕ ಭಾರತೀಯರು ಇದ್ದಾರೆ. ಈ ಹಡಗಿನಲ್ಲಿಯ 64 ಜನರಿಗೆ ಮಾರಣಾಂತಿಕ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಯಾವುದೇ ಭಾರತೀಯ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿಲ್ಲವಾದರೂ ಆತಂಕವು ದಿನೇದಿನೇ ಹೆಚ್ಚುತ್ತಿದೆ. ಶುಕ್ರವಾರ ಹಡಗಿನಲ್ಲಿರುವ ಪಶ್ಚಿಮ ಬಂಗಾಳ ಮೂಲದ 30ರ ಹರೆಯದ ವ್ಯಕ್ತಿಯೋರ್ವರು ಸೋಂಕುಪೀಡಿತರನ್ನು ಆರೋಗ್ಯವಂತ ವ್ಯಕ್ತಿಗಳಿಂದ ಪ್ರತ್ಯೇಕಿಸಲು ಜಪಾನ್ ಸರಕಾರಕ್ಕೆ ಸೂಚಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತುರ್ತು ಸಂದೇಶಗಳನ್ನು ರವಾನಿಸಿದ್ದರು. ಕೊರೋನ ವೈರಸ್ ಪಿಡುಗಿನ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ತೆರವುಗೊಳಿಸಿದಂತೆ ಜಪಾನಿನಲ್ಲಿಯ ಭಾರತೀಯರನ್ನೂ ರಕ್ಷಿಸುವಂತೆ ಅವರು ಕೋರಿದ್ದಾರೆ.
‘ಸಾಮಾಜಿಕ ಮಾಧ್ಯಮಗಳಲ್ಲಿ ನೇರವಾಗಿ ಮಾತನಾಡುವುದು ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ. ಆದರೆ ನಾನು ಭಯಗೊಂಡಿರುವುದರಿಂದ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದೇನೆ. ಇಂದು ನಾನು ಮಾತನಾಡದಿದ್ದರೆ ನಾಳೆ ಮಾತನಾಡಲು ನಾನು ಬದುಕುಳಿದಿರುತ್ತೇನೆಯೇ ಇಲ್ಲವೇ ಎನ್ನುವುದು ನನಗೆ ಗೊತ್ತಿಲ್ಲ ’ಎಂದು ಈ ವ್ಯಕ್ತಿ ತನ್ನ ಪೋಸ್ಟ್‌ವೊಂದರಲ್ಲಿ ಹೇಳಿದ್ದಾರೆ.
ಹಡಗಿಗೆ ಸಂಬಂಧಿಸಿದಂತೆ ಬೆಳವಣಿಗೆಗಳ ಮೇಲೆ ನಿಕಟ ನಿಗಾಯಿರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶುಕ್ರವಾರ ಹೇಳಿದ್ದರು.
ಜಪಾನಿ ಅಧಿಕಾರಿಗಳು ಈವರೆಗೆ ಸೋಂಕಿನ ಲಕ್ಷಣಗಳು ಕಂಡುಬಂದಿದ್ದ ಹಡಗಿನಲ್ಲಿರುವ ಸುಮಾರು 280 ಜನರ ತಪಾಸಣೆ ನಡೆಸಿದ್ದಾರೆ. ಇನ್ನೂ ಆರು ಜನರ ತಪಾಸಣೆ ವರದಿಗಳನ್ನು ಶನಿವಾರ ಬಿಡುಗಡೆಗೊಳಿಸಲಾಗಿದ್ದು,ಈ ಪೈಕಿ ಮೂವರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಡೈಮಂಡ್ ಪ್ರಿನ್ಸೆಸ್ ಹಡಗು ಸೋಮವಾರ ಸಂಜೆ ಜಪಾನ್ ತೀರವನ್ನು ತಲುಪಿತ್ತು. ಗುರುವಾರ ಅದನ್ನು ಯೋಕೊಹಾಮಾದ ಬಳಿ ಸಾಗಿಸಿ ಫೆ.19ರವರೆಗೆ ನಿರ್ಬಂಧದಲ್ಲಿರಿಸಲಾಗಿದೆ.
ಸೋಂಕುಪೀಡಿತರ ಓರ್ವ ಗಂಭೀರ ಸ್ಥಿತಿಯಲ್ಲಿದ್ದಾನೆ. ಹಡಗಿನಲ್ಲಿ ಹಿರಿಯ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನೆದುರಿಸುತ್ತಿದ್ದಾರೆ.







