ಬಿಎಸ್‌ವೈ ಅಸಮರ್ಥ ಮುಖ್ಯಮಂತ್ರಿ: ಸಿದ್ದರಾಮಯ್ಯ ಟೀಕೆ

ಕಲಬುರಗಿ, ಫೆ.8: ಮುಖ್ಯಮಂತ್ರಿ ಯಡಿಯೂರಪ್ಪ ಖಾತೆ ಹಂಚಲಾರದಷ್ಟು ಅಸಮರ್ಥರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರಕ್ಕೂ ಹೈಕಮಾಂಡ್ ಅನ್ನುತ್ತಾರೆ. ಸಚಿವ ಸಂಪುಟ ವಿಸ್ತರಣೆ ಮಾತ್ರವಲ್ಲದೆ, ಖಾತೆ ಹಂಚಿಕೆಗೂ ಹೈಕಮಾಂಡ್ ಮೇಲೆ ಅವಲಂಬಿತರಾಗುವ ಮೂಲಕ ಅಸಮರ್ಥ ಮುಖ್ಯಮಂತ್ರಿಯಾಗಿದ್ದಾರೆಂದು ಆರೋಪಿಸಿದರು.
ಬಿ.ಎಸ್.ಯಡಿಯೂರಪ್ಪಗೆ ಯಾವುದೇ ಸ್ವಾತಂತ್ರವಿಲ್ಲ. ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕ ಸೇರಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಸಾಮಾಜಿಕ ಸಮಾನತೆ ಕಾಪಾಡಲಾಗಿಲ್ಲ. ಇದರಿಂದ ಅಸಮಾಧಾನ ಹೆಚ್ಚಾಗುತ್ತದೆ. ಸರಕಾರದ ಮೇಲೂ ಇದು ಪರಿಣಾಮ ಬೀರುತ್ತೆ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಲ್ಲಿ ಸ್ವಲ್ಪ ವಿಳಂಬವಾಗಿದೆ. ಶೀಘ್ರವೇ ನೇಮಕ ಆಗಲಿದೆ. ಅದನ್ನು ಹೊರತು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಯಾರೂ ನಮ್ಮ ಶಿಷ್ಯರಲ್ಲ, ಅವರೆಲ್ಲಾ ಇದೀಗ ಬಿಜೆಪಿಗೆ ಹೋಗಿದ್ದಾರೆ. ಹೀಗಿರಬೇಕಾದರೆ ಅವರು ನನ್ನ ಶಿಷ್ಯರು ಹೇಗಾಗುತ್ತಾರೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ







