ಶಾಹೀನ್‌ಬಾಗ್: ಮತ ಚಲಾಯಿಸಲು ಸರತಿ ಸಾಲು

ಹೊಸದಿಲ್ಲಿ, ಫೆ.8: ಕಳೆದ ಸುಮಾರು 2 ತಿಂಗಳಿನಿಂದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ಕಾರಣದಿಂದ ಸುದ್ದಿಯ ಕೇಂದ್ರವಾಗಿದ್ದ ಶಾಹೀನ್‌ಬಾಗ್‌ನ ಮತದಾನ ಕೇಂದ್ರದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.
ದಿಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಹೀನ್‌ಬಾಗ್‌ನ ಬಳಿಯಿರುವ ಶಾಹೀನ್ ಪಬ್ಲಿಕ್ ಸ್ಕೂಲ್‌ನಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ದಿಲ್ಲಿಯ ಓಕ್ಲಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಾಹೀನ್‌ಬಾಗ್‌ನಲ್ಲಿ ಅಲ್ಪಸಂಖ್ಯಾತ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ನಾವು ಭಾರತದ ಪೌರರಾಗಿದ್ದು ಭಾರತ ಮತ್ತು ಅದರ ಸಂವಿಧಾನಕ್ಕಾಗಿ ಮತ ಚಲಾಯಿಸಿದ್ದೇವೆ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ರಾಷ್ಟ್ರೀಯ ವಿಷಯಗಳೇ ಚುನಾವಣೆಯ ಕೇಂದ್ರಬಿಂದುವಾಗಿದೆ. ಯಾಕೆಂದರೆ ಸ್ಥಳೀಯ ಸಮಸ್ಯೆಗಳೇ ಇಲ್ಲ. ನಮ್ಮ ಪ್ರದೇಶದಲ್ಲಿ ನೀರು, ವಿದ್ಯುಚ್ಛಕ್ತಿಯ ಸಮಸ್ಯೆಯಿಲ್ಲ ಎಂದವರು ಹೇಳಿದ್ದಾರೆ.
ಶಾಹೀನ್‌ಬಾಗ್ ನ ಎಲ್ಲಾ ಐದು ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾಧಿಕಾರಿ ಘೋಷಿಸಿದ್ದರು. ಹಾಲಿ ಶಾಸಕ, ಆಪ್‌ನ ಅಮನುತಲ್ಲಾ ಖಾನ್, ಕಾಂಗ್ರೆಸ್‌ನ ಪರ್ವೇಝ್ ಹಶ್ಮಿ ಮತ್ತು ಬಿಜೆಪಿಯ ಬ್ರಹ್ಮಸಿಂಗ್ ಬಿಧೂರಿ ಮಧ್ಯೆ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ.
ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ದೇಶದ್ರೋಹಿಗಳು ಹಾಗೂ ರಾಷ್ಟ್ರವಿರೋಧಿಗಳು ಎಂದು ಬಿಂಬಿಸಲು ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪ್ರಯತ್ನಿಸಿತ್ತು. ಆದರೆ ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಭಿವೃದ್ಧಿ ಕಾರ್ಯ, ಶಾಲೆ, ನೀರು, ವಿದ್ಯುಚ್ಛಕ್ತಿ ಇತ್ಯಾದಿ ಸ್ಥಳೀಯ ವಿಷಯಗಳಿಗೆ ಪ್ರಚಾರದಲ್ಲಿ ಆದ್ಯತೆ ನೀಡಿತ್ತು. ದಕ್ಷಿಣ ದಿಲ್ಲಿಯಲ್ಲಿರುವ ಶಾಹೀನ್‌ಬಾಗ್ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ಕಾರಣದಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.







