ಬಾಲ ನ್ಯಾಯಮಂಡಳಿಯಲ್ಲಿ ನಡೆಯುತ್ತಿದ್ದ ಕಥುವಾ ಅತ್ಯಾಚಾರ ಆರೋಪಿಯ ವಿಚಾರಣೆಗೆ ತಡೆ

ಹೊಸದಿಲ್ಲಿ, ಫೆ.8: ಕಾಶ್ಮೀರದ ಕಥುವಾದಲ್ಲಿ 2018ರಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕನ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಬಾಲ ನ್ಯಾಯಮಂಡಳಿಯಲ್ಲಿ ಈ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ. ಅಪರಾಧ ಘಟಿಸಿದ ಸಂದರ್ಭ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದ ಎಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ತಪ್ಪಾಗಿ ದೃಢೀಕರಿಸಿದೆ ಎಂಬ ಜಮ್ಮು ಮತ್ತು ಕಾಶ್ಮೀರ ಆಡಳಿತದ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿದ್ದು ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಗೊಳಿಸಿದೆ.
ನ್ಯಾಯಾಧೀಶರಾದ ಎನ್‌ವಿ ರಮಣ, ಅಜಯ್ ರಸ್ತೋಗಿ ಮತ್ತು ವಿ ರಾಮಸುಬ್ರಮಣಿಯನ್ ನ್ಯಾಯಪೀಠದ ಸದಸ್ಯರಾಗಿದ್ದಾರೆ. ನಗರಪಾಲಿಕೆಯ ದಾಖಲೆ ಮತ್ತು ಶಾಲೆಯ ದಾಖಲೆಯಲ್ಲಿ ನಮೂದಿಸಲಾಗಿರುವ ಆರೋಪಿಯ ಜನನ ದಿನಾಂಕದಲ್ಲಿ ವ್ಯತ್ಯಾಸವಿದೆ ಎಂಬುದನ್ನು ಪರಿಗಣಿಸದೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೃಢೀಕರಿಸಿದೆ ಎಂದು ಜಮ್ಮು ಕಾಶ್ಮೀರ ಆಡಳಿತದ ಪರ ವಕೀಲರು ಸುಪ್ರೀಂಕೋರ್ಟ್‌ಗೆ ತಿಳಿಸಿದರು. ಅಲ್ಲದೆ ತನ್ನ ಕೋರಿಕೆಯಂತೆ ಜನವರಿ 6ರಂದು ಸುಪ್ರೀಂಕೋರ್ಟ್ ಅಪ್ರಾಪ್ತ ಎನ್ನಲಾಗಿರುವ ಆರೋಪಿಗೆ ನೋಟಿಸ್ ಜಾರಿಗೊಳಿಸಿದ್ದರೂ ಆತನ ವಿರುದ್ಧದ ವಿಚಾರಣಾ ಪ್ರಕ್ರಿಯೆ ಬಾಲನ್ಯಾಯ ಮಂಡಳಿಯಲ್ಲಿ ಮುಂದುವರಿದಿದೆ ಎಂದು ವಕೀಲರು ಸುಪ್ರೀಂ ಗಮನಕ್ಕೆ ತಂದರು.
ಈ ಆರೋಪಿ ಸಂತ್ರಸ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮುಖ್ಯ ಪಿತೂರಿಗಾರನಾಗಿದ್ದಾನೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.







