ಆರೋಗ್ಯಕರ ಪರಿಸರದಲ್ಲಿ ಹಾಸ್ಯ ಸಾಹಿತ್ಯ ಬೆಳವಣಿಗೆ: ಶಿವಕುಮಾರ್

ಉಡುಪಿ, ಫೆ.8: ಇಂದು ಹಾಸ್ಯ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಉತ್ತಮ ಹಾಸ್ಯ ಬರಹಗಳು ಪತ್ರಿಕೆಗಳಿಗೆ ಬರುತ್ತಿವೆ. ಯುವ ಜನತೆ, ಸ್ವಾಫ್ಟ್‌ವೇರ್ ಇಂಜಿನಿಯರ್‌ಗಳು ಕೂಡ ಹಾಸ್ಯ ಬರಹಗಳನ್ನು ಬರೆಯಲು ಆರಂಭಿಸಿದ್ದಾರೆ. ಹೀಗೆ ಆರೋಗ್ಯಕರ ಪರಿಸರದಲ್ಲಿ ಹಾಸ್ಯ ಸಾಹಿತ್ಯ ಬೆಳೆಯುತ್ತಿದೆ ಎಂದು ಅಪರಂಜಿ ಹಾಸ್ಯ ಪತ್ರಿಕೆಯ ಸಂಪಾದಕ ಶಿವಕುಮಾರ್ ಹೇಳಿದ್ದಾರೆ.
ಉಡುಪಿ ಸುಹಾಸಂ ವತಿಯಿಂದ ಶನಿವಾರ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸಲಾದ ಹಾಸ್ಯ ಸಾಹಿತ್ಯ ಪತ್ರಿಕೆಗಳು ನಡೆದು ಬಂದ ದಾರಿ, ಕೊರವಂಜಿ, ಅಪರಂಜಿ ಪತ್ರಿಕೆಗಳ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಟಿವಿ ಕಾರ್ಯಕ್ರಮದಲ್ಲಿ, ಸಿನೆಮಾದಲ್ಲಿ ಬರುವ ಹಾಸ್ಯಗಳು ಒಂದು ಕ್ಷಣದಲ್ಲಿ ರಂಜಿಸುವಂತಹ ಹಾಸ್ಯಗಳಾಗಿವೆ. ಅದರಲ್ಲಿ ಯಾವುದೇ ಸದಭಿರುಚಿ ಹಾಸ್ಯ ಗಳು ಇರುವುದಿಲ್ಲ. ಆದರೆ ಹಾಸ್ಯಕ್ಕೆ ಅದರದ್ದೇ ಆದ ವೌಲ್ಯಗಳಿರುತ್ತವೆ. ಹಾಸ್ಯ ಎಂದಿಗೂ ಕೀಳುಮಟ್ಟಕ್ಕೆ ಇಳಿಯಬಾರದು. ಅದು ಯಾವತ್ತೂ ಸಾತ್ವಿಕ ವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿದ್ವಾಂಸ ನಾಡೋಜ ಕೆ.ಪಿ.ರಾವ್ ಮಾತನಾಡಿ, ಹಾಸ್ಯಕ್ಕೆ ಇಂದು ವಸ್ತುಗಳೇ ಸಿಗುತ್ತಿಲ್ಲ. ಜಗತ್ತಿನಲ್ಲಿ ಈಗಾಗಲೇ ಇರುವ ಹಾಸ್ಯಗಳಿಗೆ ಹೊಸ ಹೊಸ ರೂಪ ಕೊಟ್ಟು ಜನರನ್ನು ರಂಜಿಸಲಾಗುತ್ತಿದೆ. ಇದರಿಂದ ಹಾಸ್ಯದ ಕುರಿತು ಜನರಲ್ಲಿ ಆಸಕ್ತಿ ಕಡಿಮೆಯಾಗಿ ಇಂದು ಹಾಸ್ಯ ಪತ್ರಿಕೆಗಳು ಒಂದೊಂದೇ ಕಣ್ಣು ಮುಚ್ಚುತ್ತಿವೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಸಮಾಜ ಸೇವಕ ಉಡುಪಿ ವಿಶ್ವನಾಥ ಶೆಣೈ ಉಪಸ್ಥಿತ ರಿದ್ದರು. ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ಗೋಪಾಲ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಉಪಾ್ಯ ಕಾರ್ಯಕ್ರಮ ನಿರೂಪಿಸಿದರು.







