ಶಾಹಿನ್ ಬಾಗ್ ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಗೆ ಧ್ವನಿಗೂಡಿಸಿದ ಆರೆಸ್ಸೆಸ್ ಕಾರ್ಯಕರ್ತ

ಹೊಸದಿಲ್ಲಿ, ಫೆ.8: ಪೌರತ್ವ ಕಾಯ್ದೆಯನ್ನು ವಿರೋಧಿಸಿ ದಕ್ಷಿಣ ದಿಲ್ಲಿಯ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಆರೆಸ್ಸೆಸ್‌ನ ಕಾರ್ಯಕರ್ತ, ಬಿಜೆಪಿ ಬೆಂಬಲಿಗ ಕೈಜೋಡಿಸಿದ್ದು , ಪ್ರಧಾನಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.
ಶುಕ್ರವಾರ ಸಂಜೆ ಶಾಹಿನ್‌ಬಾಗ್‌ಗೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆರೆಸ್ಸೆಸ್ ಕಾರ್ಯಕರ್ತ ದೀಪಕ್ ಮದನ್ ದೀಪು, “ಮಾತೆಯರು, ಪುತ್ರಿಯರ ಬಗ್ಗೆ ಯಾವಾಗಲೂ ಮಾತನಾಡುವ ಪ್ರಧಾನಿ ಮೋದಿ, ಶಾಹಿನ್‌ಬಾಗ್‌ಗೆ ಬಂದು ಇಲ್ಲಿ ಸೇರಿರುವ ಮಹಿಳೆಯರೊಂದಿಗೆ ಮಾತನಾಡಬೇಕು” ಎಂದು ಆಗ್ರಹಿಸಿದರು.
ಪೌರತ್ವ ಕಾಯ್ದೆಯು ವಿವಿಧ ಸಮುದಾಯದ ಮಧ್ಯೆ ಒಡಕು ಮೂಡಿಸುತ್ತಿದೆ. ಧರ್ಮದ ಆಧಾರದಲ್ಲಿ ಮೋದಿ ಭಾರತೀಯರನ್ನು ಪ್ರತ್ಯೇಕಿಸಬಾರದು. ಎಲ್ಲಾ ಧರ್ಮವನ್ನೂ ಸಮಾನವಾಗಿ ಕಾಣಬೇಕು ಎಂದು ದೀಪಕ್ ಮದನ್ ಹೇಳಿದ್ದಾರೆ. ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಸುಳ್ಳು ಸುದ್ದಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಹಿಂದು ಸಂಘಟನೆಗಳು ದೇಶದ ಜನತೆಗೆ ಅದರಲ್ಲೂ ನಿರ್ದಿಷ್ಟವಾಗಿ ದಿಲ್ಲಿಯ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದು ಇತ್ತೀಚೆಗೆ ನಡೆದ ಗುಂಡು ಹಾರಾಟದ ಪ್ರಕರಣಗಳು ಇಂತಹ ಸುಳ್ಳು ಮಾಹಿತಿಯ ಫಲವಾಗಿದೆ. ತಾನು ಶಾಹೀನ್‌ಬಾಗ್ ಪ್ರತಿಭಟನಾ ಸ್ಥಳಕ್ಕೆ ಎರಡು ಬಾರಿ ಭೇಟಿ ನೀಡಿದ್ದೆ. ಆದರೆ ತನಗೆ ಒಮ್ಮೆಯೂ ಕೆಟ್ಟ ಅನುಭವವಾಗಿಲ್ಲ ಅಥವಾ ಭೀತಿಯ ಭಾವನೆ ಮೂಡಿಲ್ಲ. ಸಂಬಂಧಿಕರ ಮನೆಗೆ ಆಗಮಿಸಿದಂತಹ ಅನುಭವವಾಗಿದೆ ಎಂದು ದೀಪಕ್ ಮದನ್ ಹೇಳಿದ್ದಾರೆ.
ದೀಪಕ್ ಬಿಜೆಪಿಯ ಕಾರ್ಯಕರ್ತ ಮತ್ತು ಬಜರಂಗ ದಳ ಹಾಗೂ ಆರೆಸ್ಸೆಸ್ ಸದಸ್ಯ ಎಂದು ಹೇಳಲಾಗಿದೆ. ದಿಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಸ್ತೆಯ ಪಕ್ಕದಲ್ಲಿ ‘ ದೇಶಕ್ಕೆ ನರೇಂದ್ರ ಮೋದಿಯ ಅಗತ್ಯವಿದೆ, ದಿಲ್ಲಿಗೆ ಕೇಜ್ರಿವಾಲ್ ಅಗತ್ಯವಿದೆ’ ಎಂಬ ಬೃಹತ್ ಜಾಹೀರಾತು ಫಲಕ ಸ್ಥಾಪಿಸಿ ಗಮನ ಸೆಳೆದಿದ್ದರು.







