ಉ.ಪ್ರದೇಶ ಪೊಲೀಸ್ ದೌರ್ಜನ್ಯ ಪ್ರಕರಣ: ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯ
ಹೊಸದಿಲ್ಲಿ, ಫೆ.8: ಉತ್ತರಪ್ರದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ದೌರ್ಜನ್ಯ ಎಸಗಿರುವುದಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ನಿವೃತ್ತ ನ್ಯಾಯಾಧೀಶರ ತಂಡಕ್ಕೆ ವಹಿಸಬೇಕು ಎಂದು ಮಹಿಳಾ ಹೋರಾಟಗಾರರನ್ನು ಒಳಗೊಂಡಿದ್ದ ಸತ್ಯಶೋಧನಾ ತಂಡ ಬಲವಾಗಿ ಆಗ್ರಹಿಸಿದೆ.
ಸತ್ಯಶೋಧನಾ ತಂಡ ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ರಾಜ್ಯದಲ್ಲಿ ನೆಲೆಸಿರುವ ಭೀತಿಯ ವಾತಾವರಣ ದೂರಗೊಳಿಸಬೇಕು ಮತ್ತು ಮುಸ್ಲಿಂ ಯುವಕರನ್ನು ವಶಕ್ಕೆ ಪಡೆಯುವುದು ಹಾಗೂ ಬಂಧನ ಪ್ರಕ್ರಿಯೆಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ತಂಡ ಒತ್ತಾಯಿಸಿದೆ. ವುಮೆನ್ ಎಗೈನ್ಸ್ಟ್ ಸೆಕ್ಷುವಲ್ ವೈಲೆನ್ಸ್ ಆ್ಯಂಡ್ ಸ್ಟೇಟ್ ರಿಪ್ರೆಷನ್(ಡಬ್ಲೂಎಸ್‌ಎಸ್)ನ ಐದು ಸದಸ್ಯರ ಸತ್ಯಶೋಧನಾ ತಂಡ ಫೆ.1ಮತ್ತು 2ರಂದು ಪಶ್ಚಿಮ ಉತ್ತರಪ್ರದೇಶದ ಮೀರತ್, ಮುಝಫರ್‌ನಗರ, ಶಾಮ್ಲಿ ಮತ್ತು ಬಿಜ್ನೋರ್ ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಅಲ್ಲದೆ ಪೌರತ್ವ ಕಾಯ್ದೆ ವಿರೋಧಿಸಿ ಡಿ.18,19 ಮತ್ತು 20ರಂದು ನಡೆದಿದ್ದ ಪ್ರತಿಭಟನೆ ಸಂದರ್ಭ ಪೊಲೀಸರ ಅತಿರೇಕದ ಕ್ರಮ ಹಾಗೂ ದೌರ್ಜನ್ಯದ ಕುರಿತು ಮಾಹಿತಿ ಸಂಗ್ರಹಿಸಿತ್ತು.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಡಬ್ಲ್ಯೂಎಸ್‌ಎಸ್ ಸದಸ್ಯೆ ಮಮತಾ ದಾಸ್, ಪೊಲೀಸರ ಗುಂಡಿನ ದಾಳಿಯಿಂದ ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಪ್ರತಿಭಟನಾಕಾರರ ಗುಂಡಿಗೆ ಪ್ರತಿಭಟನಾಕರರು ಬಲಿಯಾಗಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ನಂಬಲಸಾಧ್ಯವಾಗಿದೆ ಎಂದರು. ಬಂಧನದಲ್ಲಿದ್ದವರು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಅವರ ಮನೆಗೆ ನುಗ್ಗಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಸಾಜಿದ್ ಎಂಬಾತನ ಪತ್ತೆಗಾಗಿ ಡಿ.19ರಂದು ಶಾಮ್ಲಿ ಜಿಲ್ಲೆಯ ಮವೌರ್ ಗ್ರಾಮದಲ್ಲಿರುವ ಆತನ ಮನೆಗೆ ರಾತ್ರಿ ಬಂದ ಹಲವು ಪೊಲೀಸರು ಗೇಟನ್ನು ಮುರಿದು ಒಳಹೊಕ್ಕು ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಮುಖತೋರಿಸುವಂತೆ ಅಲ್ಲಿದ್ದ ಮಹಿಳೆಯರನ್ನು ಗದರಿ, ಯುವಕರನ್ನು ಥಳಿಸಿದ್ದಾರೆ.
ಸಾಜಿದ್‌ನ ತಂದೆ, ಸಹೋದರ ಸೇರಿದಂತೆ 7 ಮಂದಿಯನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಾಜಿದ್‌ನ ಬಗ್ಗೆ ಮಾಹಿತಿ ನೀಡದಿದ್ದರೆ ಮನೆಯವರನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ ಎಂದು ಮಮತಾ ದಾಸ್ ಹೇಳಿದ್ದಾರೆ.
ಅಲ್ಲದೆ ಅದೇ ದಿನ ಮಧ್ಯರಾತ್ರಿ ಕಳೆದು 1 ಗಂಟೆಯ ವೇಳೆಗೆ , ಮೂವರು ವ್ಯಕ್ತಿಗಳನ್ನು ಹುಡುಕುತ್ತಾ ಗೋಗ್ವಾನ್ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಪೊಲೀಸರು ಆ ಮನೆಯಿಂದ ಒಡವೆ ಮತ್ತು ಬೈಕನ್ನು ಕೊಂಡೊಯ್ದಿದ್ದಾರೆ. ತಪ್ರಾನಾ ಗ್ರಾಮದಲ್ಲಿ ನವೀದ್ ಎಂಬ ಯುವಕನನ್ನು ಮಧ್ಯರಾತ್ರಿ ಮನೆಯಿಂದ ಬಂಧಿಸಿ ಠಾಣೆಗೆ ಕರೆದೊಯ್ದು ಕರೆಂಟ್ ಶಾಕ್ ನೀಡಲಾಗಿದೆ. ತನ್ನನ್ನು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿದ್ದ ಮುಹಮ್ಮದ್ ಫುಖ್ರಾನ್ ಎಂಬ ವಿದ್ಯಾರ್ಥಿಯನ್ನು ಜೈಲಿಗೆ ಹಾಕಲಾಗಿದೆ. ದೆಹ್ಸಾನಿ ಇಸ್ಲಾಂಪುರ ಗ್ರಾಮದ ಮದರಸದ ಮುಖ್ಯಸ್ಥ ಮೌಲ್ವಿ ಮುಹಮ್ಮದ್ ಸದ್ದಾಂ ಎಂಬವರು ತನ್ನ ಸಹೋದರ ಹಾಗೂ ಸ್ನೇಹಿತರ ಪತ್ತೆಗಾಗಿ ಠಾಣೆಗೆ ತೆರಳಿದಾಗ ಮೌಲ್ವಿಯವರನ್ನು ಬಂಧಿಸಲಾಗಿದೆ. ಡಿಸೆಂಬರ್ 18ರಿಂದ 19ರ ಮಧ್ಯೆ 34 ಮಂದಿಯನ್ನು ಬಂಧಿಸಲಾಗಿದ್ದು ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕುವಂತೆ ಇವರೆಲ್ಲರಿಗೂ ಸೂಚಿಸಲಾಗಿದೆ. ಅಲ್ಲದೆ ಬಂಧನದ 24 ಗಂಟೆಯೊಳಗೆ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿಲ್ಲ ಎಂದು ಮಮತಾ ದಾಸ್ ಹೇಳಿದ್ದಾರೆ.
ಅನುರಾಧಾ ಬ್ಯಾನರ್ಜಿ, ವಿದ್ಯಾ, ಶೃದ್ಧಾ ಟಿಕೆ ಮತ್ತು ಪ್ಯೋಲಿ ಸ್ವಾತಿಜಾ ಸತ್ಯಶೋಧನಾ ತಂಡದಲ್ಲಿದ್ದರು. ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಪಡೆಗಳ ನಿಯೋಜನೆಯನ್ನು ಕ್ರಮೇಣ ಹೆಚ್ಚಿಸಿದ್ದು ಸ್ಪಷ್ಟವಾಗಿದೆ. ಮುಸ್ಲಿಂ ಯುವಕರನ್ನು ನಿರ್ದಿಷ್ಟವಾಗಿ ಗುರಿಪಡಿಸಿ ತಲೆ ಮತ್ತು ಎದೆಗೆ ಗುಂಡು ಹಾರಿಸಲು ಆದ್ಯತೆ ನೀಡಲಾಗಿದೆ. ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸದಂತೆ ಅಥವಾ ಚಿಕಿತ್ಸೆ ನಿರಾಕರಿಸುವಂತೆ ಅನಧಿಕೃತವಾಗಿ ಆದೇಶಿಸಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ವಿಳಂಬಿಸಲಾಗಿದ್ದು ಮೃತದೇಹವನ್ನು ಮನೆಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಿಲ್ಲ. ಅಲಹಾಬಾದ್ ಹೈಕೋರ್ಟ್‌ನ ಆದೇಶದ ಬಳಿಕ ಬಿಡುಗಡೆಗೊಳಿಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ವೈರುಧ್ಯಗಳಿವೆ ಎಂದು ತಂಡದ ವರದಿ ತಿಳಿಸಿದೆ.
ಹಿಂಸಾಚಾರ ನಡೆಯುವ ಸಾಧ್ಯತೆಯಿಂದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಹೇಳಿಕೆಗೆ ಆಧಾರಗಳಿಲ್ಲ. ಹಲವು ಪ್ರದೇಶಗಳಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ನೆಲೆಸಲು ಪೊಲೀಸ್ ಕಾರ್ಯಾಚರಣೆಯೇ ಕಾರಣ. ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದು, ಕಿಟಕಿಯ ಗಾಜು ಒಡೆದಿರುವ ಘಟನೆಗಳು ಪೊಲೀಸ್ ಪಡೆಯ ಜೊತೆಗೆ ಪೊಲೀಸೇತರ ವ್ಯಕ್ತಿಗಳೂ ಈ ಪೂರ್ವ ಯೋಜಿತ ಕೃತ್ಯದಲ್ಲಿ ಭಾಗಿಯಾಗಿರುವುದರ ಸೂಚನೆಯಾಗಿದೆ ಎಂದು ತಿಳಿಸಿದೆ.
ಪೊಲೀಸ್ ಮಿತ್ರರ ಪಾತ್ರ
ಪೊಲೀಸ್ ಮಿತ್ರರೆಂದು ಕರೆಯಲಾಗುವ, ಪೊಲೀಸ್ ಸಮವಸ್ತ್ರ ಧರಿಸದ ಸಶಸ್ತ್ರ ವ್ಯಕ್ತಿಗಳ ತಂಡದವರು ಪ್ರದೇಶದಲ್ಲಿ ಭೀತಿಯ ವಾತಾವರಣ ನೆಲೆಸಲು ಕಾರಣವಾಗಿದ್ದಾರೆ. ಪೊಲೀಸರ ಕೃಪಾಕಟಾಕ್ಷ ಪಡೆದಿರುವ ಇಂತಹ ಸರಕಾರಿ ಪ್ರಾಯೋಜಿತ ತಂಡಗಳು ಹಿಂಸಾಚಾರ ಮತ್ತು ಭೀತಿಯ ವಾತಾವರಣ ನಿರಂತರವಾಗಿರಲು ಕಾರಣರಾಗಿದ್ದಾರೆ ಎಂದು ವರದಿ ತಿಳಿಸಿದೆ.







