ಚೀನಾದಿಂದ ವಾಪಾಸಾದ 15 ಕೇರಳ ವಿದ್ಯಾರ್ಥಿಗಳು
ಕೊರೊನಾವೈರಸ್ ಲಕ್ಷಣ ಕಂಡುಬಂದಿಲ್ಲವೆಂದ ವೈದ್ಯರು
ಕೊಚ್ಚಿ,ಫೆ.8: ಚೀನಾದಿಂದ ಇಲ್ಲಿಗೆ ಹಿಂದಿರುಗಿದ ಕೇರಳದ ಹದಿನೈದು ವಿದ್ಯಾರ್ಥಿಗಳಲ್ಲಿ ಮಾರಣಾಂತಿಕ ನೊವೆಲ್ ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಅವರನ್ನು ಮನೆಗಳಿಗೆ ತೆರಳಲು ವೈದ್ಯರು ಅನುಮತಿ ನೀಡಿದ್ದಾರೆಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಆದಾಗ್ಯೂ, ಅವರ ವೈದ್ಯಕೀಯ ತಪಾಸಣೆಯ ಮಾದರಿಗಳನ್ನು ವಿಸ್ತೃತ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆಯೆಂದು ಅವು ಹೇಳಿವೆ. ಕಲಮಾಶ್ಯೇರಿ ಸರಕಾರಿ ಕಾಲೇಜ್ ಆಸ್ಪತ್ರೆಯಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು. ಸುಮಾರು 28 ದಿನಗಳವರೆಗೆ ಎಲ್ಲೂ ಹೋಗದೆ, ಮನೆಯಲ್ಲಿಯೇ ಪ್ರತ್ಯೇಕವಾಗಿ ಉಳಿದುಕೊಳ್ಳುವಂತೆಯೂ ವೈದ್ಯರು ಅವರಿಗೆ ಸೂಚನೆ ನೀಡಿದ್ದಾರೆ.
ಮಾರಣಾಂತಿಕ ಕೊರೊನೊ ವೈರಸ್ ಹಾವಳಿಯಿಂದ ಬಾಧಿತವಾಗಿರುವ ಚೀನಾದ ಹುಬೈ ಪ್ರಾಂತದಲ್ಲಿ ಸಿಲುಕಿಕೊಂಡಿದ್ದ ಈ ವಿದ್ಯಾರ್ಥಿಗಳನ್ನು ಶುಕ್ರವಾರ ವಿಶೇಷ ವಿಮಾನದ ಮೂಲಕ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿದಿದ್ದರು.
ವಿಮಾನನಿಲ್ದಾಣದಲ್ಲಿ ಈ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ನಡೆಸಿದ ಬಳಿಕ ಅವರನ್ನು ಐದು ಸೋಂಕುನಿರೋಧಕವಾದ ಆ್ಯಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಕೊಂಡೊಯ್ದು ಅವರ ತಪಾಸಣೆ ನಡೆಸಲಾಗಿತ್ತು.
ಹುಬೈ ಪ್ರಾಂತದ ಕುನ್‌ಮಿಂಗ್ ವಿಮಾನನಿಲ್ದಾಣದಿಂದ ಈ ವಿದ್ಯಾರ್ಥಿಗಳನ್ನು ಬ್ಯಾಂಕಾಕ್‌ಗೆ ತರಲಾಗಿತ್ತು. ಅಲ್ಲಿಂದ ಏರ್ ಏಶ್ಯ ವಿಮಾನದಲ್ಲಿ ಅವರು ಶುಕ್ರವಾರ ಬೆಳಗ್ಗೆ 11:00 ಗಂಟೆಗೆ ಕೊಚ್ಚಿ ತಲುಪಿದ್ದರು. ಆದಾಗ್ಯೂ, ವಿದ್ಯಾರ್ಥಿಗಳ ಸಂಬಂಧಿಕರಿಗೆ ಅವರನ್ನು ಭೇಟಿ ಮಾಡಲು ಈ ತನಕವು ಅವಕಾಶ ನೀಡಲಾಗಿಲ್ಲವೆಂದು ತಿಳಿದುಬಂದಿದೆ.







