ವಾಮಂಜೂರು: ಮಂಗಳಜ್ಯೋತಿ ಐಟಿಐ ವಾರ್ಷಿಕೋತ್ಸವ

ವಾಮಂಜೂರು, ಫೆ.8: ದೇಶದ ಗ್ರಾಮೀಣ ಪ್ರದೇಶದ ಐಟಿಐಗಳು ಅತ್ಯುತ್ತಮ ತರಬೇತಿ ನೀಡುತ್ತಿವೆ. ಅದರಲ್ಲೂ ದ.ಕ. ಜಿಲ್ಲೆಯ ಐಟಿಐಗಳು ಕ್ರಮಬದ್ಧ ಮತ್ತು ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರಾಗಿವೆ. ಇಲ್ಲಿನ ಐಟಿಐ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ವಿಫುಲ ಅವಕಾಶವಿದೆ ಎಂದು ಮುಲ್ಕಿ ಎಂಆರ್ ಪೂಂಜಾ ಐಟಿಐ ಪ್ರಾಂಶುಪಾಲ ಯಶವಂತ ಎನ್. ಸಾಲ್ಯಾನ್ ಹೇಳಿದರು.
ವಾಮಂಜೂರು ಎಸ್‌ಡಿಎಂ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಇದರ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿವಿ ಹೆಗ್ಡೆ ಮಾತನಾಡಿ, ಈಗ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಆಧುನಿಕ ಯಂತ್ರೋಪಕರಣಗಳ ಬಳಕೆಯಾಗುತ್ತಿದೆ. ಆದರೂ ಇಲ್ಲೆಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳ ಅಗತ್ಯವಿದೆ. ಉದ್ಯೋಗ ಕೇತ್ರಗಳಲ್ಲಿ ಐಟಿಐ ಕಲಿತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದ್ದು, ಸ್ವಂತಿಕೆ ಮೂಲಕವೂ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.
ಅಂಗವಿಕಲರ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎ. ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಸಂಸ್ಥೆಯ ಖಜಾಂಚಿ ಕೆ. ದೇವರಾಜ್, ಆಡಳಿತಾಧಿಕಾರಿ ಗಣೇಶ್ ಭಟ್, ಮುಖ್ಯ ಶಿಕ್ಷಕರಾದ ರಮೇಶ್ ಆಚಾರ್ಯ, ಮಾರಿಯಟ್ ಮಸ್ಕರೇನಸ್ ಉಪಸ್ಥಿತರಿದ್ದರು.
ಐಟಿಐ ಪ್ರಾಂಶುಪಾಲ ನರೇಂದ್ರ ಸ್ವಾಗತಿಸಿದರು. ಸಂಸ್ಥೆಯ ಮುಖ್ಯ ತರಬೇತಿ ಅಧಿಕಾರಿ ಫ್ಲಾವಿಯಾ ಡಿಸೋಜ ವರದಿ ವಾಚಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಪ್ರಿಯಾ ಬಹುಮಾನಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಪ್ರಫುಲ್ಲಾ ಮತ್ತು ಸುಜೀತಾ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ರಾಜೇಶ್ವರಿ ವಂದಿಸಿದರು.







