ರೈಲು ಕೋಚ್ ಫ್ಯಾಕ್ಟರಿ ಕೈಬಿಟ್ಟರೆ ಉಗ್ರ ಹೋರಾಟ: ಕೆ.ಹೆಚ್.ಮುನಿಯಪ್ಪ ಎಚ್ಚರಿಕೆ

ಕೋಲಾರ, ಫೆ.8: ಶ್ರೀನಿವಾಸಪುರದಲ್ಲಿ ರೈಲು ಕೋಚ್ ಪ್ಯಾಕ್ಟರಿ ಸ್ಥಾಪನೆಗೆ ಅಡ್ಡಿ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಯುಪಿಎ-1 ಸರ್ಕಾರದ ಅವಧಿಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲ್ವೇ ಕೋಚ್ ಪ್ಯಾಕ್ಟರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆಯನ್ನು ನೀಡಲಾಗಿತ್ತು. ಆ ಸಂಬಂಧ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿ ಮತ್ತು ರಾಜ್ಯ ಸರ್ಕಾರದ ಪಾಲು ನೀಡಲು ಒಪ್ಪಿಗೆ ಸೂಚಿಸಿ ಕೇಂದ್ರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. 2014ರ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಕೆಲವೇ ಗಂಟೆಗಳ ಮುಂಚಿತವಾಗಿ ಆಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಸದರಿ ರೈಲ್ವೇ ಕೋಚ್ ಪ್ಯಾಕ್ಟರಿ ದೇಶದ ಎರಡನೇ ಕೋಚ್ ಪ್ಯಾಕ್ಟರಿಯಾಗಿ ಜಿಲ್ಲೆಯಲ್ಲಿ ಪ್ರಾರಂಭಿಸಲು ಆಗಿನ ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಈ ಯೋಜನೆಯಿಂದ ಸುಮಾರು ಹತ್ತು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ನೇರವಾಗಿ ಹಾಗೂ ಪರೋಕ್ಷವಾಗಿ ಹತ್ತು ಸಾವಿರ ಉದ್ಯೋಗ ಸೃಷ್ಠಿಯಾಗುತ್ತಿತ್ತು.
ಇದೀಗ ಕೇಂದ್ರ ಸರ್ಕಾರ ಸದರಿ ಜಾಗದಲ್ಲಿ ರೈಲ್ವೆ ಗ್ಯಾರೇಜ್ (ವರ್ಕ್ ಶಾಪ್) ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಮಾಧ್ಯಮಗಳಲ್ಲಿ ಕೋಚ್ ಫ್ಯಾಕ್ಟರಿ ರದ್ದು ಎಂದು ತಿಳಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾಗಿದ್ದು, ತಾನು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ಮೊದಲಿಗೆ ರೈಲ್ವೆ ವರ್ಕ್ ಶಾಪ್ ಪ್ರಾರಂಭ ಮಾಡುತ್ತಿದ್ದು, ಕ್ರಮೇಣ ಹಂತ ಹಂತವಾಗಿ ಕೋಚ್ ಪ್ಯಾಕ್ಟರಿ ನಿರ್ಮಾಣಕ್ಕೂ ಚಾಲನೆ ನೀಡಲಾಗುವುದೆಂದು ಭರವಸೆ ನೀಡಿದ್ದಾರೆ. ಹಾಗಾಗಿ ಸಚಿವರ ಮೇಲೆ ಭರವಸೆ ಹೊಂದಿರುತ್ತೇನೆ ಎಂದರು.
ಮಾನ್ಯ ಲೋಕಸಭಾ ಸದಸ್ಯರು ಕೋಚ್ ಪ್ಯಾಕ್ಟರಿ ಪ್ರಾರಂಭಿಸಲು ತಾವೂ ಕೂಡ ಕಾಯಾ, ವಾಚಾ, ಮನಸಾ ಶ್ರಮಿಸಬೇಕು. ಈಗಾಗಲೇ ಕೇಂದ್ರ ಸರ್ಕಾರ ಮಂಜೂರಾತಿ ನೀಡಿರುವುದರಿಂದ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದ್ದು, ಈ ಯೋಜನೆಗೆ ಚಾಲನೆ ನೀಡಲು ತಮ್ಮದೂ ಕೊಡುಗೆ ಇರಲಿ ಎಂದು ಸಲಹೆ ನೀಡಿದರು.
ಮುಂದಿನ ತಿಂಗಳು ದೆಹಲಿಗೆ ಹೋಗಿ ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಿ ಕೋರ್ಚ್ ಪ್ಯಾಕ್ಟರಿ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಜೊತೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಮಾತನಾಡಿ ರಾಜ್ಯಕ್ಕೆ ಇದು ಒಂದು ದೊಡ್ಡ ಕೊಡುಗೆಯಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಬಿಡದಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಕ್ಕೆ ಚರ್ಚಿಸಲಾಗುವುದು ಎಂದರು.
ಒಂದು ವೇಳೆ ಸರ್ಕಾರಗಳು ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಅಡ್ಡಗಾಲು ಹಾಕಿದರೆ ತಾನೇ ಖುದ್ದಾಗಿ ನೇತೃತ್ವ ವಹಿಸಿ ಉಗ್ರ ಹೋರಾಟ ರೂಪಿಸುವ ಮೂಲಕ ಕೋಚ್ ಫ್ಯಾಕ್ಟರಿ ಸ್ಥಾಪನೆಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿಸಿಸಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಹಿರಿಯ ಕಾಂಗ್ರೆಸ್ ಮುಖಂಡ ಅತಾವುಲ್ಲಾ, ನಗರಸಭಾ ಸದಸ್ಯರುಗಳಾದ ಪ್ರಸಾದ್ ಬಾಬು, ಮುಬಾರಕ್, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಉದಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಲ್.ಎ.ಮಂಜುನಾಥ್, ಊರುಬಾಗಲು ಶ್ರೀನಿವಾಸ್, ಜಯದೇವ್, ನಾಗರಾಜ್, ಹೆಚ್.ವಿ. ಕುಮಾರ್, ಮುರಳಿ ಉಪಸ್ಥಿತರಿದ್ದರು.







