ಆಪರೇಷನ್ ಕಮಲದ ಹೊಸ ರಹಸ್ಯ ಬಹಿರಂಗಪಡಿಸಿದ ನೂತನ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ, ಫೆ. 9: ನಾವು ಆರಂಭದಲ್ಲಿ 36 ಮಂದಿ ಶಾಸಕರಿದ್ದೆವು. ಆದರೆ, ಕೊನೆಗೆ ಉಳಿದಿದ್ದು, 17 ಮಂದಿ ಶಾಸಕರು ಮಾತ್ರ ಎಂದು ನೂತನ ಸಚಿವ ರಮೇಶ್ ಜಾರಕಿಹೊಳಿ, ಆಪರೇಷನ್ ಕಮಲದ ಹೊಸ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ರವಿವಾರ ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾವು ಪಕ್ಷ ಬಿಡುವ ವೇಳೆ ನಮ್ಮೊಂದಿಗೆ ಒಟ್ಟು 36 ಮಂದಿ ಶಾಸಕರು ಇದ್ದರು ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.
ವಿರೋಧದಿಂದ ನಾನು ನಾಯಕನಾದೆ: ಡಿ.ಕೆ.ಶಿವಕುಮಾರ್ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಏಕೆಂದರೆ ಅವರು ನನ್ನನ್ನು ವಿರೋಧ ಮಾಡಿದ್ದರಿಂದಲೇ ನಾನು ನಾಯಕನಾದೆ. ಒಂದು ವೇಳೆ ಅವರು ನನ್ನನ್ನು ಅಪ್ಪಿಕೊಂಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಸಂಪುಟ ವಿಸ್ತರಣೆಯಾದ ದಿನದಂದು ನಾನು ಖುಷಿಯಾಗಿ ಇರಲಿಲ್ಲ. ಸಂಪುಟ ವಿಸ್ತರಣೆಯ ಒಂದು ದಿನ ಮೊದಲು ನನಗೆ ಸಚಿವ ಸ್ಥಾನ ಬೇಡ ಎಂದು ಗೋಕಾಕ್ ಕ್ಷೇತ್ರದ ಕಡೆಗೆ ಹೊರಟಿದ್ದೆ. ಆದರೆ, ಅಂದು ರಾತ್ರಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮನೆಗೆ ಬಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುವಂತೆ ಒತ್ತಾಯಿಸಿದರು.
ಮಹೇಶ್ ಕುಮಟಳ್ಳಿ ನನ್ನ ಕಾಲಿಗೆ ಬಿದ್ದು ಬೇಡಿಕೊಂಡರು. ಆ ಕಾರಣಕ್ಕಾಗಿ ನಾನು ನೂತನ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದೆ. ಹೀಗಿದ್ದರೂ ಪ್ರಮಾಣ ವಚನ ಮಾಡಿದ ದಿನದಂದು ಖುಷಿಯಾಗಿರಲಿಲ್ಲ. ನನ್ನ ಕಣ್ಣ ಮುಂದೆ ಮಹೇಶ್ ಕುಮಟಳ್ಳಿ, ಆರ್.ಶಂಕರ್, ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಕಾಣುತ್ತಿದ್ದರು ಎಂದು ಅಸಮಾಧಾನ ಹೊರಹಾಕಿದರು.
‘ರಾಜಕೀಯದಲ್ಲಿ ಜನರ ತೀರ್ಮಾನ ಬಹಳ ಮುಖ್ಯ. 14 ತಿಂಗಳಿಂದ ನಮ್ಮನ್ನು ಅಪಹಾಸ್ಯ ಮಾಡಿದರು. 14 ತಿಂಗಳಲ್ಲಿ ನಾವು ಮಾನಸಿಕವಾಗಿ ನೊಂದಿದ್ದೇವೆ. ನಮಗೆ ಬಂದ ಸ್ಥಿತಿ ನಮ್ಮ ವೈರಿಗೂ ಬರಬಾರದು ಎಂದ ಅವರು, ರಾಜಕೀಯ ಸಾಕಾದರೆ ಬಿಜೆಪಿಯಲ್ಲೇ ನಿವೃತ್ತಿ ಘೋಷಿಸುತ್ತೇನೆ. ಕೆಲವರು ನನ್ನ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
‘ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಅಥಣಿ ಕ್ಷೇತ್ರ. ಬೆಳಗಾವಿ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಬಿಜೆಪಿಯಲ್ಲಿ ಸಚಿವನಾಗುತ್ತೇನೆಂದು ಊಹಿಸಿರಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಯಿತು ಎಂದು ರಮೇಶ್ ಜಾರಕಿಹೊಳಿ ಹೇಳಿದರು.
‘ಒಳ್ಳೆಯದಕ್ಕಾಗಿ ನಾನು ಹಠ ಮಾಡುತ್ತೇನೆ. ಚುನಾವಣೆಯಲ್ಲಿ ನನ್ನನ್ನು ವಿರೋಧ ಮಾಡಿದವರು ನಮ್ಮವರೇ. ಚುನಾವಣೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದರು. ಆದರೆ ನಾನು ನಂಬಿದ್ದು ಯಡಿಯೂರಪ್ಪ ಮತ್ತು ಅಮಿತ್ ಶಾ ಅವರನ್ನು ಎಂದು ಹೇಳಿದರು.
‘ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೊಡ್ಡ ಚರ್ಚೆ ನಡೆದಿದೆ. ಮುಸ್ಲಿಂ ಸಮಾಜ ಹೆದರುವ ಪ್ರಶ್ನೆ ಇಲ್ಲ. ಕಾಯ್ದೆಯಲ್ಲಿ ಲೋಪದೋಶ ಇದ್ದರೆ ನಾನು ರಾಜ್ಯ ನಾಯಕರ ಜತೆಗೆ ಚರ್ಚೆಗೆ ಸಿದ್ಧ. ಮುಂದಿನ ಚುನಾವಣೆಗೆ ನಮ್ಮ ಜೊತೆಗೆ ಬನ್ನಿ’
-ರಮೇಶ್ ಜಾರಕಿಹೊಳಿ ಸಚಿವ







