ನಮ್ಮ ಹಕ್ಕುಗಳನ್ನು ದಮನಿಸಲು ಕೇಂದ್ರ ಸರಕಾರದ ಯತ್ನ: ಎಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಫೆ.9: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರವು ಸಂವಿಧಾನವು ನಮಗೆ ನೀಡಿರುವ ಎಲ್ಲ ರೀತಿಯ ಹಕ್ಕುಗಳನ್ನು ದಮನ ಮಾಡಲು ಮುಂದಾಗಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.
ಪ್ರಜಾಧಿಕಾರ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಮಾನವ ಹಕ್ಕುಗಳ, ರಾಜಕೀಯ ಹಕ್ಕುಗಳ, ಸಾಮಾಜಿಕ ಹಕ್ಕುಗಳ, ಆರ್ಥಿಕ ಹಕ್ಕುಗಳನ್ನು ರಕ್ಷಿಸಿ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಸರಕಾರದ ಆಡಳಿತ ನೀತಿಯನ್ನು ಪ್ರಶ್ನಿಸುವ ಎಲ್ಲರನ್ನೂ ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಬದುಕುವ ಹಾಗೂ ಬರೆಯುವ ಸೇರಿದಂತೆ ಹಲವಾರು ಹಕ್ಕುಗಳು ಸಂವಿಧಾನ ನೀಡಿದೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.
ಭಾರತೀಯರಾಗಿ ನಾವು ಸಮನ್ವಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಮೋದಿ, ಅಮಿತ್ ಶಾ ದೇಶದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ದೇಶ ಬದಲಾವಣೆ ಆಗಲು ಎಲ್ಲ ಧರ್ಮದವರು ಒಂದಾಗಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಜಾರಿ ಮಾಡಿರುವ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಲು ನಮಗೂ ಹಕ್ಕಿದೆ. ಚುನಾವಣೆಯ ದೃಷ್ಟಿಯಿಂದ ಮುಸ್ಲಿಮರಿಗೆ ತೊಂದರೆ ಮಾಡುವ ಕನಸನ್ನು ಪ್ರತಿಯೊಬ್ಬರೂ ಮುರಿಯಬೇಕು. ಬಿಜೆಪಿ ಕೆಲ ಮುಖಂಡರು ಮುಸ್ಲಿಮ್ ಸಮುದಾಯವನ್ನು ದೇಶದಿಂದ ಒಡಿಸಬೇಕು ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ನಮ್ಮ ಹಕ್ಕುಗಳನ್ನು ಕೇಳಲು ನಾವು ಹೆದರಬೇಕಾದ ಅವಶ್ಯಕತೆ ಇಲ್ಲ ಎಂದು ದೊರೆಸ್ವಾಮಿ ಪ್ರತಿಪಾದಿಸಿದರು.







