ವಿರಾಜಪೇಟೆ: ಕಾಡಾನೆ ದಾಳಿಗೆ ವೃದ್ಧ ಬಲಿ

ಸಿದ್ದಾಪುರ: ಬೆಳೆಗಾರನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಬಲಿ ತೆಗೆದುಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪ ಹಂಚಿತಿಟ್ಟು ಹಾಡಿಯಲ್ಲಿ ನಡೆದಿದೆ . ಅವರೆಗುಂದ ಗ್ರಾಮದ ನಿವಾಸಿ ಪೆಮ್ಮಯ್ಯ(68) ಎಂಬವರೇ ಕಾಡಾನೆ ದಾಳಿಗೆ ಬಲಿಯಾಗಿ ಮೃತಪಟ್ಟವರು.
ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಮಾಲ್ದಾರೆ ಗ್ರಾಮಕ್ಕೆ ತೆರಳಿದ ಪೆಮ್ಮಯ್ಯ ನಂತರ ಮನೆಗೆ ಹಿಂತಿರುಗಲಿಲ್ಲ. ಕಾಣೆಯಾದ ಪೆಮ್ಮಯ್ಯ ಅವರನ್ನು ಸಂಬಂಧಿಕರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗ್ಗೆ ಮಾಲ್ದಾರೆ ಹಂಚಿತಿಟ್ಟು ಮಾರ್ಗದ ರಸ್ತೆ ಬದಿಯಲ್ಲಿ ಮೃತದೇಹ ಕಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಲಾಗಿದೆ.
ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಹೆಚ್. ಎಸ್ ಬೋಜಪ್ಪ ಹಾಗೂ ಕುಶಾಲನಗರ ವಲಯದ ಎ.ಸಿ.ಎಫ್. ನೆಹರೂ, ವಲಯಾರಣ್ಯಾಧಿಕಾರಿ ಅನನ್ಯ ಕುಮಾರ್ ಭೇಟಿ ನೀಡಿ
ಕಾಡಾನೆ ದಾಳಿಗೆ ಮೃತಪಟ್ಟ ಪೆಮ್ಮಯ್ಯರವರ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ರೂ. 5 ಲಕ್ಷದ ಚೆಕ್ ನ್ನು ನೀಡಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.







