ಕೊರೋನಾ ವೈರಸ್ ಭೀತಿ: 138 ಮಂದಿಯ ಮಾಹಿತಿ ಕಲೆಹಾಕುತ್ತಿರುವ ರಾಜ್ಯ ಸರಕಾರ
4 ಮಂದಿಯ ಮೇಲೆ ವಿಶೇಷ ನಿಗಾ

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ. 9: ಭಾರತದಲ್ಲಿ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶನಿವಾರದಿಂದ 4 ಮಂದಿ ಶಂಕಿತರ ಮೇಲೆ ವಿಶೇಷ ನಿಗಾ ಇರಿಸಲಾಗಿದ್ದು, ಅವರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಿಂದ (ಎನ್ಐವಿ) 9 ಮಂದಿಯ ವರದಿ ಬಂದಿದ್ದು, ಯಾರಿಗೂ ಸೋಂಕು ಇಲ್ಲ ಎಂಬುದು ದೃಢಪಡಿಸಲಾಗಿದೆ. ಇದುವರೆಗೂ, ಒಟ್ಟು 85 ಮಂದಿಯ ಪರೀಕ್ಷಾ ವರದಿ ಬಂದಿದ್ದು, ಎಲ್ಲರೂ ನಿರಾಳರಾಗಿದ್ದಾರೆ.
ಅಧಿಕ ಸಂಖ್ಯೆಯಲ್ಲಿ ಸೋಂಕು ವರದಿಯಾದ ದೇಶಗಳಿಂದ ಬಂದಿರುವ 138 ಮಂದಿಯನ್ನು ಗುರುತಿಸಲಾಗಿದ್ದು, ಆರೋಗ್ಯ ಕಾರ್ಯಕರ್ತೆಯರು ಅವರ ಮಾಹಿತಿಯನ್ನು ನಿತ್ಯ ಕಲೆ ಹಾಕುತ್ತಿದ್ದಾರೆ. ಅವರಲ್ಲಿ 130 ಮಂದಿ ನಗರದ ವಿವಿಧೆಡೆ ಮನೆಗಳಲ್ಲಿ ನೆಲೆಸಿದ್ದು, ಉಳಿದವರು ಹೋಟೆಲ್ ಸೇರಿದಂತೆ ಬೇರೆ ಸ್ಥಳಗಳಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊರೋನಾ ವೈರಸ್ ಕುರಿತು ಬೆಂಗಳೂರಿನ ಮೆಟ್ರೋ ಸೇರಿದಂತೆ ರಾಜ್ಯದ ಎಲ್ಲ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಇದುವರೆಗೂ ಸಹಾಯವಾಣಿ ಸಂಖ್ಯೆಯ ಮೂಲಕ 1792 ಮಂದಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈವರೆಗೆ 14,153 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.







