ಬ್ರಿಟೀಷರ ವಿರುದ್ಧ ಹೋರಾಡಿ ಪಡೆದ ಕಾರ್ಮಿಕ ಹಕ್ಕುಗಳು ನಾಶವಾಗುತ್ತಿವೆ: ಡಾ.ಪ್ರಕಾಶ್
ಕಾರ್ಮಿಕ ಚಳುವಳಿಯ 100ನೆ ವರ್ಷಾಚರಣೆ

ಉಡುಪಿ, ಫೆ.9: ಬ್ರಿಟೀಷರ ವಿರುದ್ಧ ಹೋರಾಡಿ ಪಡೆದ ಕಾರ್ಮಿಕರ ಹಕ್ಕು ಗಳನ್ನು ನಾವೇ ಆಯ್ಕೆ ಮಾಡಿದ ಸರಕಾರ ಇಂದು ಕಿತ್ತೆಸೆಯುತ್ತಿದೆ. ಮೋದಿ ಸರಕಾರ ಈಗ ಇರುವ 44 ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ, ನಾಲ್ಕು ಕಾರ್ಮಿಕ ಸಮಿತಿಗಳನ್ನು ಜಾರಿಗೆ ತರುತ್ತಿದೆ. ಈ ಮೂಲಕ ಕನಿಷ್ಟ ವೇತನ, ಬೋನಸ್, ಇಎಸ್‌ಐ, ಪಿಎಫ್ ಸೇರಿದಂತೆ ಎಲ್ಲ ಕಾರ್ಮಿಕ ಕಾಯಿದೆಯನ್ನು ಒಂದೇ ಏಟಿಗೆ ಒಡೆದು ಹಾಕುತ್ತಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಆರೋಪಿಸಿದ್ದಾರೆ.
ಸಿಐಟಿಯು ಉಡುಪಿ ತಾಲೂಕು ಸಮಿತಿಯ ವತಿಯಿಂದ ಉಡುಪಿ ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಸಿಐಟಿಯು ಸುವರ್ಣ ಮಹೋತ್ಸವ ಹಾಗೂ ಕಾರ್ಮಿಕ ಚಳುವಳಿಯ 100ನೆ ವರ್ಷಾಚರಣೆಯ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಮ್ಯುನಿಸ್ಟ್ ಚಳವಳಿಯಿಂದ ಪ್ರೇರೆಪಿತರಾಗಿದ್ದ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಹಾಗೂ ಬುತುಕೇಶ್ವರ್ ದತ್ ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರಲು ಹೊರಟಿದ್ದ ಆಗಿನ ಬಿಟ್ರೀಷ್ ಸಂಸತ್ತಿಗೆ ಬಾಂಬ್ ಹಾಕಿ, ಜೈಲು ಪಾಲಾದರು. ಇಂತಹ ಯುವಕರ ತ್ಯಾಗ ಬಲಿದಾನದ ಕಾರಣದಿಂದಲೇ ನಾವು ಈ ಎಲ್ಲ ಕಾರ್ಮಿಕರ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಬ್ರಿಟಿಷರು ಯಾವ ಕಾನೂನುಗಳನ್ನು ಬಳಸಿ ಕಾರ್ಮಿಕರ ಹಕ್ಕುಗಳನ್ನು ಧಮನ ಮಾಡುತ್ತಿದ್ದರೋ, ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಇಂದಿನ ಕೇಂದ್ರ ಸರಕಾರ, ಕಾರ್ಮಿಕರ ಎಲ್ಲ ಹಕ್ಕುಗಳನ್ನು ನಾಶ ಮಾಡುವ ಕಾರ್ಯಕ್ಕೆ ಕೈಹಾಕುತ್ತಿದೆ. ತ್ಯಾಗ ಬಲಿದಾನದಿಂದ ಸ್ವಾತಂತ್ರ ಹೋರಾಟದ ಫಲವಾಗಿ ಪಡೆದ ಪ್ರತಿಯೊಂದು ಹಕ್ಕುಗಳನ್ನು ಇಂದು ನಾಶ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಬ್ರಿಟಿಷರ ಕಾಯಿದೆಯನ್ನು ವಿರೋಧಿಸುವವರನ್ನು ರಾಜದ್ರೋಹದಂತಹ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಅಟ್ಟುತ್ತಿದ್ದರು. ಇಂದು ಕೂಡ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರದ ಜಾರಿಗೆ ತಂದ ಕಾಯಿದೆ ವಿರುದ್ಧ ಪ್ರತಿಭಟನೆ ಮಾಡಿದರೆ ದೇಶದ್ರೋಹದ ಪಟ್ಟಕಟ್ಟಿ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ಈ ರೀತಿ ಬ್ರಿಟೀಷ್ ಸರಕಾರಕ್ಕೂ ನಮ್ಮ ಸರಕಾರಕ್ಕೂ ಯಾವುದೇ ವ್ಯಾತ್ಯಾಸ ಇಲ್ಲದಂತಾಗಿದೆ ಎಂದು ಅವರು ದೂರಿದರು.
ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾ ಇದರ ರಾಜ್ಯ ಉಪಾಧ್ಯಕ್ಷ ಬಿ.ಎಂ.ಮಾಧವ, ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಗಾರ ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ಸಿಐಟಿಯು ಉಡುಪಿ ತಾಲೂಕು ಉಪಾಧ್ಯಕ್ಷ ಶೇಖರ ಬಂಗೇರ ವಹಿಸಿದ್ದರು. ಕಾರ್ಮಿಕ ಸಂಘದ ಮುಖಂಡ ಬಾಲಕೃಷ್ಣ ಶೆಟ್ಟಿ, ಉಡುಪಿ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸುಂದರಿ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಮಲಾ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭಾರತಿ ಉಪಸ್ಥಿತರಿದ್ದರು.
ಉಡುಪಿ ಆಚರಣಾ ಸಮಿತಿಯ ಅಧ್ಯಕ್ಷ ಪಿ.ವಿಶ್ವನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಶಶಿಧರ ಗೊಲ್ಲ ಸ್ವಾಗತಿಸಿದರು. ಕಾರ್ಯ ದರ್ಶಿ ಕವಿರಾ್ ಎಸ್. ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಉಡುಪಿಯ ಜೋಡುಕಟ್ಟೆ ಬಳಿಯಿಂದ ಹೊರಟ ಕಾರ್ಮಿಕರ ಮೆರವಣಿಗೆಯು ಕೆಎಂ ಮಾರ್ಗ, ಶಿರಿಬೀಡು, ಬನ್ನಂಜೆ ಮಾರ್ಗ ವಾಗಿ ಸಭಾಭವನದಲ್ಲಿ ಸಮಾಪನಗೊಂಡಿತು. ಬಳಿಕ ವಿವಿಧ ಸಾಂಸ್ಕೃತಿಕ ಹಾಗೂ ಕೊನೆಯಲ್ಲಿ ಯೋಗ ಕಾರ್ಯಕ್ರಮ ನಡೆಯಿತು.
ಬ್ರಿಟೀಷರಿಗಿಂತಲೂ ನೀಚ ಸರಕಾರ
ಭದ್ರಾವತಿ ಕಾರ್ಖಾನೆ ಕಾರ್ಮಿಕರಿಗೆ ಆಗಿನ ಮೈಸೂರು ಸರಕಾರ ಮೇ ಡೇ ಆಚರಣೆ ಹಾಗೂ ಮೆರವಣಿಗೆ ನಡೆಸಲು ಅವಕಾಶ ನೀಡಲಿಲ್ಲ. ಇದರ ವಿರುದ್ಧ ಬಹಳ ದೊಡ್ಡ ಹೋರಾಟ ನಡೆದಿತ್ತು. ಈಗಿನ ಸರಕಾರ ಕೂಡ ಇಂದು ಅದನ್ನೇ ಮಾಡುತ್ತಿದೆ. ಕಾರ್ಮಿಕರಿಗೆ ಪ್ರತಿಭಟನೆ ನಡೆಸಲು, ಮೆರವಣಿಗೆ ಮಾಡಲು ಅನುಮತಿ ಕೊಡುತ್ತಿಲ್ಲ. ಬೆಂಗಳೂರಿನಲ್ಲಿ ಯಾವುದೇ ಹೋರಾಟಕ್ಕೂ ಅವಕಾಶ ನೀಡುತ್ತಿಲ್ಲ. ಪೊಲೀಸರು ಮೆರವಣಿಗೆ ಮಾಡುವಾಗ ಹೇಳುವ ಘೋಷಣೆ ಗಳನ್ನು ಮೊದಲೇ ಬರೆದುಕೊಡುವಂತೆ ಕೇಳುತ್ತಿದ್ದಾರೆ. ಬ್ರಿಟೀಷರಿಗಿಂತಲೂ ನೀಚ ರೀತಿಯಲ್ಲಿ ಇಂದಿನ ಸರಕಾರ ನಡೆದುಕೊಳ್ಳುತ್ತಿದೆಂದು ಡಾ.ಕೆ.ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
‘ಬ್ರಿಟಿಷರಿಗೆ ಶರಣಾಗಿದ್ದ ಸಾವರ್ಕರ್ ವೀರ ಅಲ್ಲ’
ಬ್ರಿಟಿಷರ ವಿರುದ್ಧ ಹೋರಾಡಿ ಅಧಿಕ ಸಂಖ್ಯೆಯಲ್ಲಿ ಬಂಧನಕ್ಕೆ ಒಳಗಾಗಿ ಶಿಕ್ಷೆ ಅನುಭವಿಸಿದ್ದ ಕ್ರಾಂತಿಕಾರಿಗಳು, ಕಾರ್ಮಿಕರ ಹಾಗೂ ಕಮ್ಯುನಿಸ್ಟ್ ನಾಯಕರು, ಎಂದಿಗೂ ನಮ್ಮನ್ನು ಬಿಡುಗಡೆ ಮಾಡುವಂತೆ ಬ್ರಿಟಿಷರಿಗೆ ಕ್ಷಮಾ ಪಾನ ಪತ್ರ ಬರೆದು ಶರಣಾಗಿರಲಿಲ್ಲ. ಆದರೆ ಇಂದು ಬಿಜೆಪಿಯವರು ವೀರ ಎಂಬುದಾಗಿ ಕರೆಯುವ ಸಾವರ್ಕರ್ ಶಿಕ್ಷೆ ಅನುಭವಿಸಲು ಸಾಧ್ಯವಾಗದೆ ಬ್ರಿಟಿಷರಿಗೆ ಕ್ಷಮಾಪಾನ ಪತ್ರ ಬರೆದರು. ಕನಿಷ್ಟ ಆರು ಬಾರಿ ಕ್ಷಮಾಪಾನ ಪತ್ರ ಬರೆದಿದ್ದ ಸಾವರ್ಕರ್, ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಯಾವತ್ತೂ ಕೂಡ ಬ್ರಿಟೀಷ್ ವಿರೋಧಿ ಹೋರಾಟದಲ್ಲಿ ಭಾಗವಹಿಸಲಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದ ಹಾಗೂ ಬ್ರಿಟೀಷರ ಸೇವೆ ಮಾಡುತ್ತಿದ್ದವರೇ ಇವತ್ತು ‘ದೇಶಪ್ರೇಮ’ದ ಬಗ್ಗೆ ಮಾತನಾಡುತ್ತಿರುವುದು ದುರಂತ ಎಂದು ಡಾ.ಕೆ.ಪ್ರಕಾಶ್ ಆರೋಪಿಸಿದರು.








