ಡಾ.ನಾದಾ ಶೆಟ್ಟಿಯ ‘ಗೆರೆ’ ಕಾದಂಬರಿ ಬಿಡುಗಡೆ

ಮಂಗಳೂರು, ಫೆ.9: ಹಿರಿಯ ಸಾಹಿತಿ, ಕವಿ, ಸಂಘಟಕ ಡಾ.ನಾ. ದಾಮೋದರ ಶೆಟ್ಟಿ ಅವರ ‘ಗೆರೆ’ ಕಾದಂಬರಿಯ ಬಿಡುಗಡೆ ಕಾರ್ಯಕ್ರಮವು ‘ರಂಗ ಸಂಗಾತಿ’ ಮಂಗಳೂರು ವತಿಯಿಂದ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಸಹಕಾರದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ರವಿವಾರ ಜರುಗಿತು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ‘ಗೆರೆ’ ಕಾದಂಬರಿಯಲ್ಲಿ ಸಮಾಜದ ನೈತಿಕತೆಯ ಪರಿಧಿಯನ್ನು ಕಟ್ಟಿಕೊಡುವುದರೊಂದಿಗೆ ಗೆರೆಯನ್ನು ಮೀರಿದವರ ಅಪಾಯದ ಬದುಕು ಮತ್ತು ಗೆರೆ ಮೀರದ ಆದರ್ಶ ಬದುಕಿನ ಚಿತ್ರಣವನ್ನು ತಿಳಿಸಿಕೊಡುವ ಪ್ರಯತ್ನವು ಸಾಗಿದೆ ಎಂದರು.
‘ಗೆರೆ’ಕಾದಂಬರಿಯಲ್ಲಿ ಪ್ರಸ್ತುತ ದೇಶದ ಕೌಟುಂಬಿಕ ವ್ಯವಸ್ಥೆಯ ಆವರಣದಲ್ಲಿದ್ದುಕೊಂಡು ನಡೆಯುವಂತಹ ವಿಚಾರಗಳನ್ನು ಹಾಗೂ ನಡೆಯಲು ಸಾಧ್ಯವಿರುವ ಸಂಗತಿಯನ್ನು ತುಂಬಾ ಸಮರ್ಥ ರೀತಿಯಲ್ಲಿ ಬಿಂಬಿಸುವ ಕಾರ್ಯವನ್ನು ಮಾಡಲಾಗಿದೆ. ಕರಾವಳಿಯ ಸುತ್ತಮುತ್ತ ಸಾಗುವ ‘ಗೆರೆ’ಯಲ್ಲಿ ಕರಾವಳಿಯ ಮುಂದಿನ ದಿನಗಳಲ್ಲಿ ಹರಿದು ಬರುವ ಹಣದ ಪ್ರಭಾವಕ್ಕೆ ಭದ್ರವಾದ ತಡೆಗೋಡೆಯನ್ನು ಒಡ್ಡುತ್ತಾ ಇಲ್ಲಿನ ಜನರು ನೈತಿಕತೆಯ ದಾರಿಯಲ್ಲಿ ಬದುಕು ಕಟ್ಟುವುದು ಹೇಗೆ ಎನ್ನುವ ವಿಚಾರದ ಮೇಲೆಯೂ ಬೆಳಕು ಚೆಲ್ಲುವ ಕೆಲಸವನ್ನು ಮಾಡಿದೆ ಎಂದು ಡಾ. ಬಿ.ಎ.ವಿವೇಕ ರೈ ನುಡಿದರು.
‘ಗೆರೆ’ಯ ಕುರಿತು ಮಾತನಾಡಿದ ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಪಟ್ಟಣ ನಿಯಂತ್ರಣ ಎನ್ನುವುದು ಮಾನಸಿಕ ಒಪ್ಪಂದ. ಗೆರೆ ಕಾದಂಬರಿಯಲ್ಲಿ ಇದು ಈರ್ಷೆಗೆ ಹಾಗೂ ಕಾನೂನಿಗೆ ಸಂಬಂಧಪಟ್ಟಂತೆ ಇರಕೂಡದು ಎನ್ನುವ ಅಂಶ ವನ್ನು ಪ್ರತಿಪಾದಿಸುವ ಕಾರ್ಯ ಮಾಡಲಾಗಿದೆ. ಕಾದಂಬರಿಯಲ್ಲಿ ಅನರ್ಹರಾದ ತಾಯಿಯೊಬ್ಬಳನ್ನು ಸಮರ್ಥ ರೀತಿಯಲ್ಲಿ ತೋರಿಸುವ ಕಾರ್ಯವನ್ನು ಮಾಡುವ ಮೂಲಕ ‘ಗೆರೆ’ ಪ್ರಾದೇಶಿಕ ಮತ್ತು ಜನಾಂಗೀಯ ಮಿತಿಯನ್ನು ದಾಟುತ್ತಾ ಕೌಟುಂಬಿಕ ವಿಚಾರಗಳನ್ನು ಒಂದು ಕಲಾಕೃತಿಯಾಗಿ ರೂಪಿಸುವ ಕೆಲಸ ಮಾಡಲಾಗಿದೆ ಎಂದರು.
ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಕಾದಂಬರಿಯ ಉದ್ದಕ್ಕೂ ತೋರಿಸುತ್ತಾ ಈಚಿಗಿನ ಎರಡೂವರೆ ದಶಕ ದಲ್ಲಿ ನಡೆಯುತ್ತಿರುವ ಜೀವನ ವ್ಯವಸ್ಥೆ, ಅಲೋಚನಾ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆಯ ಮೂಲಕ ಕುಟುಂಬ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ಬದಲಾವಣೆಗಳು ಈ ಕೃತಿಯಲ್ಲಿ ಬಿಂಬಿಸಲಾಗಿದೆ ಎಂದರು.
ಸಂತ ಅಲೋಶಿಯಸ್ ಕಾಲೇಜಿನ ಕುಲಸಚಿವ ಡಾ.ಆಲ್ವಿನ್ ಡೇಸಾ ಅಧ್ಯಕ್ಷತೆ ವಹಿಸಿದ್ದರು. ‘ಗೆರೆ’ ಕಾದಂಬರಿಯ ಕೃತಿಕಾರ ಡಾ.ನಾ. ದಾಮೋದರ ಶೆಟ್ಟಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಡಾ.ಸರಸ್ವತಿ ಸ್ವಾಗತಿಸಿದರು. ಪತ್ರಕರ್ತ ಮೈಮ್ ರಾಮದಾಸ್ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಶಶಿರಾಜ್ ಕಾವೂರು ವಂದಿಸಿದರು.







