ಅಸ್ಪ್ರಶ್ಯತೆಗಾಗಿ ಹೊಡೆದಾಡಿಕೊಂಡರೆ ರಾಷ್ಟ್ರಕ್ಕೆ ಅಪಾಯ: ವಸಂತ ಕುಮಾರ್
ಎಬಿವಿಪಿ ರಾಜ್ಯ ಸಮ್ಮೇಳನ

ಮಂಗಳೂರು, ಫೆ. 9: ಸಂಸ್ಕೃತಿ ಎಂಬುದು ಕೇವಲ ಮಾತು ಅಲ್ಲ. ಅದು ಬದುಕು. ಹಾಗಾಗಿ ಸಂಸ್ಕೃತಿ, ರಾಷ್ಟ್ರೀಯತೆಯ ಸ್ವರೂಪವನ್ನು ಮಕ್ಕಳಲ್ಲಿ ತುಂಬಿಸದಿದ್ದರೆ ಜಾತಿ, ಮತ, ಅಸ್ಪಶ್ಯತೆ, ರಾಜಕೀಯ ಎಂದು ಹೊಡೆದಾಡಿಕೊಂಡರೆ ಸಂಸ್ಕೃತಿಯ ಜತೆಗೆ ರಾಷ್ಟ್ರಕ್ಕೆ ಅಪಾಯ ಎದುರಾಗಲಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ.ವಸಂತ ಕುಮಾರ್ ಹೇಳಿದರು.
ನಗರದ ಪುರಭವನದಲ್ಲಿ ನಡೆಯುತ್ತಿರುವ ಎಬಿವಿಪಿ 39ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ರವಿವಾರ ಅವರು ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಸಂಸ್ಕೃತಿ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ ಯಾವುದೇ ರಾಷ್ಟ್ರವನ್ನು ಜಗತ್ತಿನ ಯಾವ ಶಕ್ತಿಯೂ ನಾಶಪಡಿಸಲು ಅಸಾಧ್ಯ ಎಂದು ವಸಂತ ಕುಮಾರ್ ನುಡಿದರು. ಎಬಿವಿಪಿ ಮಾಜಿ ರಾಜ್ಯಾಧ್ಯಕ್ಷ ಚ.ನ. ಶಂಕರ್ ರಾವ್ ಮಾತನಾಡಿ ‘ರಾಷ್ಟ್ರ ಎಂಬುದು ಭಾವನಾತ್ಮಕ ಸಂಗತಿಯಾಗಿದೆ. ಅದು ಭಾಷೆ, ಸಂಸ್ಕೃತಿ, ಪರಂಪರೆ, ಮೂಲ ಪುರುಷರ ಬಗೆಗಿನ ಗೌರವ ಸಮ್ಮಿಶ್ರಣವಾಗಿದೆ. ದೇಶ ಗಟ್ಟಿಯಾಗಿ ಉಳಿಯಬೇಕಾದರೆ ರಾಷ್ಟ್ರಭಕ್ತಿಯೂ ಬೇಕು. ದೇಶಭಕ್ತಿಯ ಕೊರತೆಯಿಂದಾಗಿಯೇ ರಾಷ್ಟ್ರೀಯ ಹಿತಾಸಕ್ತಿ ಕಡೆಗಣಿಸಲ್ಪಡುತ್ತಿದೆ ಎಂದರು.
ಎಬಿವಿಪಿ ರಾಜ್ಯ ಉಪಾಧ್ಯಕ್ಷ ಡಾ. ರೋಹಿಣಾಕ್ಷ ಶಿರ್ಲಾಲು ಮಾತನಾಡಿ ದೇಶಕ್ಕೆ ಸ್ವಾತಂತ್ರ ದೊರೆತು 7 ದಶಕಗಳಾದರೂ ಕೂಡ ನಮ್ಮದೇ ಆದ ಪೂರ್ಣಪ್ರಮಾಣದ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ವಿಫಲರಾಗಿದ್ದೇವೆ ಎಂದರು. ಎಬಿವಿಪಿ ಕರ್ನಾಟಕ ಪ್ರಾಂತ ಅಧ್ಯಕ್ಷ ಡಾ. ವೀರೇಶ್ ಬಾಳೇಕಾಯಿ, ಬೆಂಗಳೂರು ಪ್ರಾಂತ ಅಧ್ಯಕ್ಷ ಡಾ. ಸತೀಶ್, ಪ್ರಾಂತ ಕಾರ್ಯದರ್ಶಿ ಪ್ರತೀಕ್ ಮಾಳಿ, ಬೆಂಗಳೂರು ಪ್ರಾಂತ ಕಾರ್ಯದರ್ಶಿ ಸೂರಜ್ ಪಂಡಿತ್ ಉಪಸ್ಥಿತರಿದ್ದರು.







