ಹಣಕಾಸು ಬಿಕ್ಕಟ್ಟನ್ನು ನಿಭಾಯಿಸಲು ಕಂತುಗಳಲ್ಲಿ ಶಸ್ತ್ರಾಸ್ತ್ರ ಖರೀದಿ,ರಕ್ಷಣಾ ಭೂಮಿ ಮಾರಾಟ: ಸಿಡಿಎಸ್ ಜ.ಬಿಪಿನ್ ರಾವತ

ಹೊಸದಿಲ್ಲಿ,ಫೆ.9: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ 1.34 ಲ.ಕೋ.ರೂ.ಗಳ ಪಿಂಚಣಿಗಳನ್ನು ವಿತರಿಸಲು ಪರದಾಡುತ್ತಿರುವ ಮತ್ತು ಈಗಾಗಲೇ ಮಾಡಿರುವ ಶಸ್ತ್ರಾಸ್ತ್ರ ಖರೀದಿಗಳ ಇಎಂಐಗಳನ್ನು ಪಾವತಿಸಲೂ ಕೈಯಲ್ಲಿ ಹಣವಿಲ್ಲದ ಸಶಸ್ತ್ರ ಪಡೆಗಳ ಪಾಲಿಗೆ ಇನ್ನೊಂದು ನಿರಾಶಾದಾಯಕ ಬಜೆಟ್ ಆಗಿದೆ. ಆದರೆ ರಕ್ಷಣಾ ಖರೀದಿಗಳ ಉಸ್ತುವಾರಿಯನ್ನು ಹೊಂದಿರುವ ನೂತನ ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು ಈ ಬಗ್ಗೆ ಆಶಾವಾದಿಯಾಗಿದ್ದಾರೆ.
ಆಂಗ್ಲ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾವತ್ ಅವರು,‘ನಾವು ಮುಂಗಡಪತ್ರವನ್ನು ಹಣಕಾಸಿನ ದೃಷ್ಟಿಯಿಂದ ನೋಡಬಾರದು. ಮುಂಗಡಪತ್ರದಲ್ಲಿ ನಮಗೆ ಲಭ್ಯವಾಗಿಸಿರುವ ಹಣಕಾಸಿನ ನಿರ್ವಹಣೆಯತ್ತ ನಾವು ನೋಡಬೇಕು. ಒಂದು ವೇಳೆ ಸರಕಾರವು ನಮಗೆ ಎರಡು ಲ.ಕೋ.ರೂ.ಗಳನ್ನು ನೀಡಿ ಮುಂದಿನೆರಡು ವರ್ಷಗಳಲ್ಲಿ ಸಶಸ್ತ್ರ ಪಡೆಗಳನ್ನು ಆಧುನಿಕರಣಗೊಳಿಸೋಣ ಎಂದು ಹೇಳಿದ್ದರೆ ಹಾಗೆ ಮಾಡಲು ನಮಗೆ ಸಾಧ್ಯವೇ? ಇಲ್ಲ,ಏಕೆಂದರೆ ನಮಗೆ ಅಗತ್ಯವಾಗಿರುವುದು ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಅದು ಬಾಳೆಹಣ್ಣು ಮತ್ತು ಕಿತ್ತಳೆಗಳನ್ನು ಖರೀದಿಸಿದಂತಲ್ಲ ’ಎಂದು ಹೇಳಿದರು.
ಮುಂಗಡ ಪತ್ರದಲ್ಲಿ ಸಶಸ್ತ್ರ ಪಡೆಗಳಿಗೆ ಕೇವಲ 1.13 ಲ.ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈಗ ಬಾಕಿಯಿರುವ ಇಎಂಐಗಳನ್ನು ಪಾವತಿಸಿದ ಬಳಿಕ ಹೊಸ ಖರೀದಿಗೆ ಏನಾದರೂ ಹಣ ಉಳಿಯುವುದೇ ಎನ್ನುವುದು ಸಶಸ್ತ್ರ ಪಡೆಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ನಮ್ಮ ಆದ್ಯತೆಗಳು ಏನು ಎನ್ನುವುದನ್ನು ನಾವು ನೋಡಬೇಕು. ಮೂರೂ ಪಡೆಗಳ ಆಧುನೀಕರಣದಲ್ಲಿ ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು. ಆದರೆ ಏನೇ ಖರೀದಿ ಮಾಡಲಿ,ಅದು ಹಂತ ಹಂತವಾಗಿ ನಡೆಯಬೇಕು ಎನ್ನುವುದನ್ನು ಪ್ರಮುಖವಾಗಿ ಬಿಂಬಿಸಲು ನಾನು ಬಯಸಿದ್ದೇನೆ. ಉದಾಹರಣೆಗೆ ನಾವು ಎಲ್ಲ ಟ್ಯಾಂಕ್‌ಗಳನ್ನು ಮೂರು ವರ್ಷಗಳಲ್ಲಿ ಖರೀದಿಸಿದರೆ 20-30 ವರ್ಷಗಳ ಬಳಿಕ ಎಲ್ಲವೂ ಹಳೆಯದಾಗಿ ಬಳಕೆಗೆ ಅನರ್ಹವಾಗುತ್ತವೆ. ಅದಕ್ಕೆ ಅವಕಾಶವಾಗದಂತೆ ಹಂತ ಹಂತವಾಗಿ ಖರೀದಿ ಪ್ರಕ್ರಿಯೆ ನಡೆಸಬೇಕು ’ ಎಂದರು.
‘ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿಗಳಿಗಾಗಿ ಮುಂದಿನ 10 ವರ್ಷಗಳಲ್ಲಿ 35,000 ಕೋ.ರೂ.ಗಳನ್ನು ಕ್ರೋಢೀಕರಿಸುವುದು ನನ್ನ ಉದ್ದೇಶವಾಗಿದೆ. ಇದಕ್ಕೆ ರಕ್ಷಣಾ ಹಣವನ್ನು ಬಳಸಲಾಗುವುದಿಲ್ಲ. ರಕ್ಷಣಾ ಭೂಮಿಯ ಕೆಲವು ಭಾಗವನ್ನು ನಾವು ಭಾರತಮಾಲಾ ರಸ್ತೆಗಳಂತಹ ರಾಷ್ಟ್ರೀಯ ಯೋಜನೆಗಳಿಗಾಗಿ ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಹಸ್ತಾಂತರಿಸಿ ಅದಕ್ಕೆ ಪ್ರತಿಫಲವಾಗಿ ಅಲ್ಲಿ ನಮಗೆ ಅಗತ್ಯವಾದ ಮೂಲಸೌಕರ್ಯ ನಿರ್ಮಾಣಕ್ಕೆ ಕೇಳಿಕೊಳ್ಳಬಹುದಾಗಿದೆ ’ ಎಂದು ರಾವತ್ ನುಡಿದರು.







