ಸಿಎಎ, ಎನ್‌ಆರ್‌ಸಿ ಪ್ರಕ್ರಿಯೆ: ಬ್ರಾಹ್ಮಣರು ಸೇರಿ ಎಲ್ಲರಿಗೂ ಮಾರಕ; ರಾಜ್ಯಸಭಾ ಸದಸ್ಯ ಡಾ.ನಾಸಿರ್ ಹುಸೇನ್

ಬೆಂಗಳೂರು, ಫೆ.9: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಪ್ರಕ್ರಿಯೆಗಳಿಂದ ಬ್ರಾಹ್ಮಣರು ಸೇರಿ ಎಲ್ಲ ಸಮುದಾಯಗಳಿಗೂ ಮಾರಕವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಡಾ.ನಾಸಿರ್ ಹುಸೇನ್ ಹೇಳಿದರು.
ರವಿವಾರ ಇಲ್ಲಿನ ಆರ್‌ಟಿನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಎ, ಎನ್‌ಆರ್‌ಸಿ ಪ್ರಕ್ರಿಯೆಗಳು ಹೇಗೆ ಜನರಿಗೆ ತಲುಪಲಿದೆ. ಇದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಇದುವರೆಗೂ ಕೇಂದ್ರ ಸರಕಾರ ಬಹಿರಂಗ ಪಡಿಸಿಲ್ಲ. ಆದರೆ, ಇವು ಜಾರಿಯಾದಲ್ಲಿ ಮುಸ್ಲಿಮರಿಗೆ ಮಾತ್ರವಲ್ಲದೆ, ಎಲ್ಲರು ತೊಂದರೆಗೆ ಒಳಪಡಲಿದ್ದಾರೆ ಎಂದರು.
ಸಿಎಎ ವಿರೋಧದ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು, ಇದನ್ನು ಹಿಂದೂ-ಮುಸ್ಲಿಂ ಜಗಳವನ್ನಾಗಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಅಕ್ರಮವಾಗಿ ದೇಶದೊಳಗೆ ನುಸುಳಿ ವಾಸಿಸುತ್ತಿದ್ದರೆ ಅವರನ್ನು ಹೊರಹಾಕಿ. ಆದರೆ, ಈ ದೇಶದಲ್ಲಿ ಬದುಕು ಕಟ್ಟಿಕೊಂಡು ನ್ಯಾಯ ಬದ್ಧವಾಗಿ ವಾಸಿಸುತ್ತಿರುವವರ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಸಮಯ ಬಂದೊದಗಿದೆ. ಈ ಹೋರಾಟ ದೇಶಕೋಸ್ಕರ ನಡೆಯುವ ಹೋರಾಟ. ಅದು ಅಲ್ಲದೆ, ದೇಶದಲ್ಲಿ ಸರಕಾರದ ವಿರುದ್ಧ ಧ್ವನಿಯೆತ್ತುತ್ತಿರುವರಲ್ಲಿ ಭಯವನ್ನು ಮೂಡಿಸುವ ಕಾರ್ಯ ಹಾಗೂ ನಾಗರಿಕರ ಹಕ್ಕನ್ನು ಧಮನಿಸುವ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಯುವಕರನ್ನು ಪ್ರಚೋದಿಸಿ ಹಾದಿ ತಪ್ಪಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
ಕೇವಲ ಮುಸ್ಲಿಮರು ಮಾತ್ರವಲ್ಲದೆ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕಾಂಗ್ರೆಸ್ ವತಿಯಿಂದ ಸಿಎಎ ವಿರುದ್ಧ ಹಾಗೂ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಬಗ್ಗೆ ಚರ್ಚೆ, ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ನಾಸಿರ್ ಹುಸೇನ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಝಮೀರ್ ಪಾಷಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
‘ಅಸ್ಸಾಂ ಪರಿಸ್ಥಿತಿ ಕುರಿತು ಚರ್ಚೆ’
ಎನ್‌ಆರ್‌ಸಿ ಜಾರಿ ಪರಿಣಾಮ ಅಸ್ಸಾಂ ಮೇಲಿನ ಪರಿಣಾಮ, ಪ್ರಸ್ತುತ ಸ್ಥಿತಿ-ಗತಿಗಳ ಬಗ್ಗೆ ಈಗಾಗಲೇ ಹಿರಿಯ ವಕೀಲರನ್ನು ಒಳಗೊಂಡ ನಿಯೋಗ ಅಸ್ಸಾಂ ಭೇಟಿ ನೀಡಿದ್ದು, ಇದರ ವರದಿಯನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಿ ಚರ್ಚೆ ನಡೆಸಲಾಗುವುದು ಎಂದು ನಾಸಿರ್ ಹುಸೇನ್ ತಿಳಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಮೇಲೆ ಹೂಡಿರುವ ದೇಶದ್ರೋಹ ಪ್ರಕರಣ ಹಿಂಪಡೆಯಬೇಕು. ಇನ್ನು, ಈ ಬಗ್ಗೆ ಸಂಸತ್ ಅಧಿವೇಶನದಲ್ಲೂ ಚರ್ಚಿಸಿ, ಕೇಂದ್ರ ಸರಕಾರವನ್ನು ಪ್ರಶ್ನಿಸಲು ಕಾಂಗ್ರೆಸ್ ಮುಂದಾಗಿದೆ.
-ಡಾ.ನಾಸಿರ್ ಹುಸೇನ್, ರಾಜ್ಯಸಭಾ ಸದಸ್ಯ







