ಬಡವರ ಮನೆಗೆ ಕಾನೂನು ನೆರವು: ಯು.ನಿಸಾರ್ ಅಹಮದ್
ಬೆಂಗಳೂರು, ಫೆ. 9: ಬಡವರ ಮನೆ ಬಾಗಿಲಿಗೆ ಕಾನೂನು ನೆರವು ನೀಡಲು ಅದಾಲತ್ ಲೀಗ್ ಏಯ್ಡ ಫೌಂಡೇಷನ್ ಮುಂದಾಗಿದ್ದು, ಅಗತ್ಯವಿದ್ದವರು ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಮಾಜಿ ಐಎಎಸ್ ಅಧಿಕಾರಿ ಯು.ನಿಸಾರ್ ಅಹಮದ್ ಹೇಳಿದ್ದಾರೆ.
ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಫೌಂಡೇಷನ್ ಉದ್ಘಾಟಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಲ್ಲಿ ಅನೇಕರಿಗೆ ಕಾನೂನಿನ ಅರಿವು ಇರುವುದಿಲ್ಲ. ಅದರಿಂದ ಅವರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಕಾನೂನು ನೆರವು ನೀಡಲು ನಾವು ಮುಂದಾಗಿದ್ದೇವೆ ಎಂದರು.
ಬಡವರು, ನೊಂದವರು, ನಿರ್ಗತಿಕರ ಮನೆ ಬಾಗಿಲಿಗೆ ಕಾನೂನು ನೆರವು ಒದಗಿಸುವ ಉದ್ದೇಶದಿಂದ ನಮ್ಮ ಸಂಸ್ಥೆ ಕೆಲಸ ಮಾಡುತ್ತದೆ. ಫೌಂಡೇಷನ್‌ನಲ್ಲಿ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಕೀಲರಾಗಿ ಕೆಲಸ ಮಾಡುತ್ತಿರುವ, ಅನುಭವಿ ವಕೀಲರನ್ನು ಒಳಗೊಂಡ ತಂಡವಿದೆ. ಅವರು ಒಂದೊಂದು ಬಾರಿ ಒಂದೊಂದು ಕಡೆ ಕ್ಯಾಂಪ್ ಮಾಡಲಿದ್ದಾರೆ ಎಂದು ಹೇಳಿದರು.
ಜನರು ನಮ್ಮ ಬಳಿಗೆ ಬರಬಹುದು ಅಥವಾ ನಾವೇ ಜನರ ಬಳಿಗೆ ಹೋಗುತ್ತೇವೆ. ಹೆಚ್ಚು ಜನರು ವಾಸಿಸುವ ಪ್ರದೇಶಗಳಲ್ಲಿ ಕ್ಯಾಂಪ್ ಮಾಡುತ್ತೇವೆ. ಅಲ್ಲಿ, ವಕೀಲರ ತಂಡಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ, ಕಾನೂನಿನ ತೊಡಕುಗಳ ಬಗ್ಗೆ ಪರಿಹಾರ ಹಾಗೂ ಅಗತ್ಯ ಸಹಕಾರ ನೀಡುವ ಕೆಲಸ ಮಾಡುತ್ತೇವೆ ಎಂದು ನುಡಿದರು.
ಹಿಂದೂ, ಮುಸ್ಲಿಮ್, ಕ್ರೈಸ್ತ ಎಂಬ ಯಾವುದೇ ಬೇಧ-ಭಾವವಿಲ್ಲದೆ ಎಲ್ಲರಿಗೂ ಸಹಾಯ, ಸಹಕಾರ ನೀಡುತ್ತೇವೆ ಎಂದ ಅವರು, ಇದೀಗ ದೇಶದಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯಿಲ್ಲ. ಈ ಕುರಿತು ನಮ್ಮ ಫೌಂಡೇಷನ್ ವತಿಯಿಂದಲೂ ಜನಜಾಗೃತಿ ಮೂಡಿಸುತ್ತೇವೆ ಎಂದರು.
ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಎ.ಎಸ್.ಪೊನ್ನಣ್ಣ ಸೇರಿದಂತೆ ಅನೇಕರು ನಮ್ಮ ತಂಡಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮದ ಜನರಿಗೂ ಈ ಕಾಯ್ದೆ ಮತ್ತು ನೀತಿಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಿದ್ದೇವೆ ಎಂದರು.
ಇದುವರೆಗೂ ಇಂಗ್ಲಿಷ್‌ನಲ್ಲಿ ಲಭ್ಯವಿದ್ದ ಸಂವಿಧಾನದ ಪ್ರತಿಯನ್ನು ಕನ್ನಡ ಹಾಗೂ ಉರ್ದು ಭಾಷೆಗೂ ಅನುವಾದ ಮಾಡಲಾಗಿದೆ. ಅದನ್ನು ವಿವಿಧ ಸಂಘ-ಸಂಸ್ಥೆಗಳಿಗೆ ಹಂಚಿಕೆ ಮಾಡುತ್ತೇವೆ. ಅವರು ಅದನ್ನು ಮುದ್ರಿಸುವ ಮೂಲಕ ಎಲ್ಲರಿಗೂ ತಲುಪಿಸುವ ಕೆಲಸ ಮಾಡಲಿದ್ದೇವೆ ಎಂದು ನಿಸಾರ್ ಅಹಮದ್ ಹೇಳಿದರು.
ಮೊದಲನೇ ಕ್ಯಾಂಪ್ ಅನ್ನು ಬೆಂಗಳೂರಿನ ಜಗಜೀವನ್ ರಾಮ್ ನಗರದಲ್ಲಿ ಆಯೋಜಿಸಲು ತೀರ್ಮಾನ ಮಾಡಿದ್ದೇವೆ. ಅಲ್ಲದೆ, ಜನರೇ ನೇರವಾಗಿ ರೆಸಿಡೆನ್ಸಿ ರಸ್ತೆಯಲ್ಲಿರುವ ನಮ್ಮ ಕಚೇರಿಗೆ ಭೇಟಿ ನೀಡಬಹುದು ಅಥವಾ ಮೊ.ಸಂ.99864 70671(ಶಾಹುಲ್ ಹಮೀದ್), 96202 45382(ನವೀದ್ ಅಹಮದ್) ಅನ್ನು ಸಂಪರ್ಕಿಸಬಹುದು.







