ಬರೇಲಿಗೆ ಕೊನೆಗೂ ಸಿಕ್ಕ ‘ಜುಮ್ಕಾ’ ಕಿವಿಯೋಲೆಯ ಬೃಹತ್ ಕಲಾಕೃತಿ ಅನಾವಣ
ಬರೇಲಿ,ಫೆ.8: ಉತ್ತರಪ್ರದೇಶದ ಬರೇಲಿಯ ರಾಷ್ಟ್ರೀಯ ಹೆದ್ದಾರಿ 24ರ ಪಕ್ಕದಲ್ಲಿ ಸ್ಥಾಪಿಸಲಾಗಿರುವ 14 ಅಡಿ ಎತ್ತರದ ಬಹುನಿರೀಕ್ಷಿತ ಜುಮ್ಕಿ (ಕಿವಿಯೋಲೆಯ ಬೃಹತ್ ಮಾದರಿ)ಯನ್ನು ಕೇಂದ್ರ ಸಚಿವ ಹಾಗೂ ಸಂಸದ ಸಂತೋಷ್ ಗಂಗ್ವಾರ್ ಶನಿವಾರ ಅನಾವರಣಗೊಳಿಸಿದರು. ಹಿಂದಿಯಲ್ಲಿ ಜುಮುಕಿಯನ್ನು ಜುಮ್ಕಾ ಎಂದು ಕರೆಯಲಾಗುತ್ತದೆ.
200 ಕೆ.ಜಿ.ಗೂ ಅಧಿಕ ಭಾರವಿರುವ ಈ ಜುಮ್ಕಾವು ಪರಸ್‌ಖೇರಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಬಣ್ಣಬಣ್ಣದ ಕಲ್ಲುಗಳಿಂದ ಆಲಂಕೃತವಾಗಿರುವ ಈ ಕಲಾಕೃತಿಗೆ ನಗರದ ಪ್ರಸಿದ್ಧ ಝರಿಯನ್ನು ಪೋಣಿಸಲಾಗಿದೆ.
ಆದಾಗ್ಯೂ ಜುಮ್ಕಿಗೂ ಹಾಗೂ ಬರೇಲಿ ನಗರಕ್ಕೂ ಯಾವುದೇ ಐತಿಹಾಸಿಕ ಸಂಬಂಧವಿಲ್ಲ. 1966ರಲ್ಲಿ ಹಿಂದಿ ಚಿತ್ರವೊಂದರ ಜಪ್ರಿಯ ಹಾಡಾದ ‘ಜುಮ್ಕಾ ಗಿರಾ ರೇ ಬರೇಲಿ ಕಿ ಬಝಾರ್ ಮೇ’ ಎಂಬ ರಾಷ್ಟ್ರದೆಲ್ಲೆಡೆ ಮೋಡಿ ಮಾಡಿತ್ತು.
ಈ ಜುಮ್ಕಾ ಹಾಡು ಬರೇಲಿ ನಗರವನ್ನು ಜನಪ್ರಿಯಗೊಳಿಸಿತ್ತು. ಈ ಹಾಡಿನಿಂದ ಪ್ರಭಾವಿತರಾಗಿ ಪ್ರವಾಸಿಗರು ಜುಮ್ಕಿ(ಕಿವಿಯೋಲೆ)ಯನ್ನು ಖರೀದಿಸಲೆಂದೇ ಇಲ್ಲಿಗೆ ಆಗಮಿಸುತ್ತಿದ್ದರು.
‘‘ಬರೇಲಿಗೆ ಆಗಮಿಸುವ ಜನರು, ಜುಮುಕಿಗಳನ್ನು ಕೇಳುತ್ತಾರೆ. ಆದರೆ ಬರೇಲಿ ಯಲ್ಲಿ ದೊರೆಯುವ ಜುಮ್ಕಿಗೂ ಬೇರೆಡೆ ಮಾರಾಟವಾಗುವ ಜುಮ್ಕಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ಹೇಳಿಬಿಡಲು ಮನಸ್ಸು ಒಪ್ಪುವುದಿಲ್ಲ. ನಾವು ಇಲ್ಲಿ ಸದಾ ವಿವಿಧ ವಿನ್ಯಾಸಗಳ ಕಿವಿಯೋಲೆಗಳನ್ನು ಮಾರಾಟ ಮಾಡುತ್ತೇವೆ.ಯಾಕೆಂದರೆ ಗ್ರಾಹಕರನ್ನು ನಿರಾಶೆಗೊಳಿಸಲು ನಾವು ಬಯಸುವುದಿಲ್ಲ’’ ಎಂದು ಸ್ಥಳೀಯ ಆಭರಣ ವ್ಯಾಪಾರಿ ಪಿ.ಕೆ.ಅಗರವಾಲ್ ಹೇಳುತ್ತಾರೆ.
ನಗರಕ್ಕೆ ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ಜುಮುಕಿಯ ಬೃಹತ್ ಕಲಾಕೃತಿಯೊಂದನ್ನು ಸ್ಥಾಪಿಸುವ ಯೋಜನೆಯನ್ನು ಬರೇಲಿ ಅಭಿವೃದ್ಧಿ ಪ್ರಾಧಿಕಾರ ರೂಪಿಸಿತ್ತು. ಆದಾಗ್ಯೂ, ಈ ಯೋಜನೆಯು ಕಾರ್ಯಗತಗೊಳ್ಳುವ ಮುನ್ನ ಅದು ಹಲವುಅಡೆತಡೆಗಳನ್ನು ಎದುರಿಸಬೇಕಾಯಿತು.







