ಡ್ಯಾನ್ಸ್‌ಬಾರ್ ಅಡ್ಡೆಗಳ ಮೇಲೆ ದಾಳಿ: 66 ಮಹಿಳೆಯರ ರಕ್ಷಣೆ
ಬೆಂಗಳೂರು, ಫೆ.9:ಕಾನೂನು ಬಾಹಿರ ನಗರದ ವಿವಿಧ ಕಡೆ ಡ್ಯಾನ್ಸ್‌ಬಾರ್ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 14 ಮಂದಿ ಆರೋಪಿ ಗಳನ್ನು ಬಂಧಿಸಿ, 66 ಮಹಿಳೆಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಲಾಲ್ ಬಾಗ್ ಪೋರ್ಟ್ ರಸ್ತೆಯ ಕೋಸ್ಟರಿಕಾ ಬಾರ್ ಅಂಡ್ ರೆಸ್ಟೋರೆಂಟ್‌ನ ಕಟ್ಟಡದಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಕಾನೂನು ಬಾಹಿರ ಡ್ಯಾನ್ಸ್‌ಬಾರ್ ನಡೆಸುತ್ತ ಹಣ ಸಂಪಾದನೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಡ್ಯಾನ್ಸ್ ಬಾರ್ ನಡೆಸುತ್ತಿದ್ದ 7 ಜನ ಆರೋಪಿಗಳನ್ನು ಬಂಧಿಸಿ, ಹೊರ ರಾಜ್ಯದ 26 ಮಹಿಳೆಯರನ್ನು ರಕ್ಷಣೆ ಮಾಡಿ, ಬರೋಬ್ಬರಿ 78 ಸಾವಿರ ರೂ.ನಗದು ಜಪ್ತಿ ಮಾಡಿ ಇಲ್ಲಿನ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಗೋಲ್ಡನ್ ಟವರ್ ಕಟ್ಟಡದ 4ನೆ ಮಹಡಿಯಲ್ಲಿರುವ ತೋಪೇಜ್ ಬಾರ್ ರೆಸ್ಟೋರೆಂಟ್‌ನಲ್ಲಿ ಡ್ಯಾನ್ಸ್‌ಬಾರ್ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ, 40 ಮಹಿಳೆಯರನ್ನು ಸಂರಕ್ಷಣೆ ಮಾಡಲಾಗಿದೆ. ಅದೇ ರೀತಿ, 23 ಸಾವಿರ ರೂ. ವಶಕ್ಕೆ ಪಡೆದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅದೇರೀತಿ, ಸಿಟಿ ಸೆಂಟರ್ ಹೊಟೇಲ್ ಕಟ್ಟಡದ ಸೆಲ್ಲಾರ್‌ನ ಬಿ ಹಾಲ್‌ನಲ್ಲಿರುವ ಬಾರ್ ರೆಸ್ಟೋರೆಂಟ್‌ನಲ್ಲಿ ಅಕ್ರಮವಾಗಿ ಮಹಿಳೆಯರನ್ನಿಟ್ಟು ಡ್ಯಾನ್ಸ್‌ಬಾರ್ ನಡೆಸುತ್ತಿರುವ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. 8 ಮಹಿಳೆಯರನ್ನು ರಕ್ಷಣೆ ಮಾಡಿ 22 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.







