ಆಂಧ್ರ ಮಾದರಿಯಲ್ಲಿಯೇ ನಮ್ಮನ್ನು ಖಾಯಂ ಮಾಡಿ: ಸಾರಿಗೆ ನೌಕರರ ಆಗ್ರಹ
ಬೆಂಗಳೂರು, ಫೆ. 9: ಆಂಧ್ರ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಸಾರಿಗೆ ನೌಕರರನ್ನು ಸರಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
ಇತ್ತೀಚಿಗೆ ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸದನದಲ್ಲಿ ಮಸೂದೆಯೊಂದನ್ನು ಮಂಡಿಸುವ ಮೂಲಕ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿವರ್ತಿಸಿದ್ದಾರೆ. ನಮ್ಮ ನೆರೆಯ ರಾಜ್ಯದಲ್ಲಿ ಮಾಡಿದ ರೀತಿಯಲ್ಲಿ ನಮ್ಮಲ್ಲಿಯೂ ಮಾಡಬೇಕು ಎಂದು ಸಾರಿಗೆ ನೌಕರರು ಸರಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.
ಜಗನ್‌ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ಬಳಿಕ ಸಾಲದ ಸುಳಿಯಲ್ಲಿರುವ ಎಪಿಎಸ್‌ಆರ್‌ಟಿಸಿಯನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಹಂತ ಹಂತವಾಗಿ ಸಾಲ ತೀರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಅದರ ನಡುವೆಯೂ ಸಾರಿಗೆ ನೌಕರರನ್ನು ಸರಕಾರಿ ನೌಕರರು ಎಂದು ಘೋಷಿಸಿರುವುದು ಮತ್ತೊಂದು ವಿಶೇಷವಾಗಿದೆ.
ಆಂಧ್ರಪ್ರದೇಶಕ್ಕಿಂತ ಕರ್ನಾಟಕದಲ್ಲಿ ನೌಕರರು, ಬಸ್‌ಗಳು ಹಾಗೂ ಹೊಣೆಗಾರಿಕೆ ಅಧಿಕವಿದೆ. ಇಲ್ಲಿ 1.26 ಲಕ್ಷ ನೌಕರರು, 22 ಸಾವಿರಕ್ಕೂ ಅಧಿಕ ಬಸ್‌ಗಳಿವೆ. ಒಂದು ವೇಳೆ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡಿದರೆ ನಿಗಮಗಳ ಲಾಭ, ನಷ್ಟಗಳ ಹೊಣೆಗಾರಿಕೆಯನ್ನು ಸರಕಾರವೇ ಹೊರಬೇಕಿರುತ್ತದೆ.





