ಸುಗಟೂರು ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ 11.37 ಕೋಟಿ ಸಾಲ ವಿತರಣೆ
ಠೇವಣಿ ಅಲ್ಲೇ ಇಟ್ಟು ಡಿಸಿಸಿ ಬ್ಯಾಂಕನ್ನು ಉಳಿಸಿ,ಬೆಳೆಸಿ: ರಮೇಶ್ ಕುಮಾರ್

ಕೋಲಾರ: ನಿಮ್ಮ ಹಿತ ಬಯಸಿ ಬಡ್ಡಿರಹಿತ ಸಾಲ ನೀಡುತ್ತಿರುವ ಡಿಸಿಸಿ ಬ್ಯಾಂಕ್ ನಿಮ್ಮ ಮಗುವಿದ್ದಂತೆ, ನೀವು ಕೂಡಿಡುವ ಪ್ರತಿ ಪೈಸೆ ಹಣವನ್ನು ನಂಬಿಕೆಯಿಂದ ಠೇವಣಿ ಇಟ್ಟು ಬ್ಯಾಂಕನ್ನು ಬೆಳೆಸಿ ಎಂದು ಮಹಿಳೆಯರಿಗೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಮನವಿ ಮಾಡಿದರು.
ರವಿವಾರ ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮದ ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ ಬ್ಯಾಂಕ್ ವತಿಯಿಂದ 232 ಮಹಿಳಾ ಸಂಘಗಳಿಗೆ 11.37 ಕೋಟಿ ರೂ ಸಾಲದ ಚೆಕ್ ವಿತರಿಸಿ ಅವರು ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಬ್ಯಾಂಕ್ ಎಂದರೆ ಸಾಲ ನೀಡುವುದು ಮಾತ್ರವಲ್ಲ, ಹಣ ಠೇವಣಿಯೂ ಇಡಬೇಕಾಗುತ್ತದೆ, ತಾಯಂದಿರ ನೆರವಿಗೆ ಬಂದಿರುವ ಡಿಸಿಸಿ ಬ್ಯಾಂಕಿನಲ್ಲಿ ತಮ್ಮ ಖಾತೆ ತೆರೆಯಲು ಎಂಪಿಸಿಎಸ್‍ಗಳು ಮುಂದಾಗಿ ಎಂದು ಕಿವಿಮಾತು ಹೇಳಿದರು.
ಸರ್ಕಾರ ಯಾವುದೇ ಇರಲಿ ವಿಧಾನಸೌಧದಲ್ಲಿ ಹೋರಾಡಿಯಾದರೂ ಮಹಿಳಾ ಸಂಘಗಳಿಗೆ 50 ಸಾವಿರದ ಬದಲಿಗೆ ಒಂದು ಲಕ್ಷ ರೂ ಸಾಲ ಸಿಗುವಂತೆ ಮಾಡುತ್ತೇನೆ, ನನ್ನನ್ನು ಆಶೀರ್ವದಿಸಿ ಆ ಶಕ್ತಿ ನೀಡಿದ್ದೀರಿ ಎಂದರು.
ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಸ್ತಿ, ಒಡವೆ ಅಡಮಾನ ಇಡಬೇಕು, ಆದರೆ ಡಿಸಿಸಿ ಬ್ಯಾಂಕ್ ನಿಮ್ಮನ್ನು ಕೂರಿಸಿ ಯಾವುದೇ ಭದ್ರತೆ ಇಲ್ಲ, ಜಾತಿ,ಪಕ್ಷ ಕೇಳದೇ ಸಾಲ ನೀಡುತ್ತಿದೆ. ನೀವು ಸಮರ್ಪಕ ಸಾಲ ಮರುಪಾವತಿಸಿ ನಿಮ್ಮ ನಂಬಿಕೆ ಉಳಿಸಿಕೊಳ್ಳಬೇಕು ಎಂದ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತವರ ಆಡಳಿತ ಮಂಡಳಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು.
30 ಸಾವಿರವಿದ್ದಾಗ 50 ಸಾವಿರ ಮಾಡಿಸಿದೆ, ಈಗ ಒಂದು ಲಕ್ಷ ಮಾಡಿಸಲು ಪ್ರಯತ್ನಿಸುತ್ತಿರುವೆ, ಸರ್ಕಾರ ಬದಲಾಗಿದೆ, ನನ್ನ ವಿರೋಧಿಗಳು ಏನೇನೋ ಮಾತನಾಡುತ್ತಾರೆ ಅವರಿಗೆ ದೇವರು ಒಳ್ಳೇದು ಮಾಡಲಿ ಎಂದರು.
ವಾಣಿಜ್ಯ ಬ್ಯಾಂಕುಗಳವರು ಬಡವ ಸಾಲ ತೀರಿಸದಿದ್ದರೆ ಮನೆ ಮುಂದೆ ತಮಟೆ ಬಾರಿಸ್ತಾರೆ, ನೂರಾರು ಕೋಟಿ ಮುಳುಗಿಸುವವರನ್ನು ಗೌರವಿಸುತ್ತಾರೆ, ದೇಶದ ಈ ಚರಿತ್ರೆ ಬದಲಾಗಬೇಕು ಎಂಬ ಧ್ಯೇಯದೊಂದಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ಸಾಲ ಯೋಜನೆಯನ್ನು ಸರ್ಕಾರದ ಮೇಲೆ ಒತ್ತಡ ಹಾಕಿ ಜಾರಿಗೆ ತಂದೆ ಎಂದು ತಿಳಿಸಿದರು.
ನನ್ನ ಕುಟುಂಬ ಸಾಲದ ಸಂಕಷ್ಟ ಅನುಭವಿಸಿದ್ದನ್ನು ಕಂಡಿರುವೆ. ಆ ಅನುಭವದಿಂದ ಈ ಕಾರ್ಯಕ್ರಮ ಮಾಡುತ್ತಿರುವೆ ಎಂದು ತಿಳಿಸಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಮಾಡುತ್ತಿರುವ ಈ ತಾಯಂದಿರ ಸೇವೆ ಶ್ಲಾಘನೀಯ ಎಂದು ಅಭಿನಂದಿಸಿದರು.
'ತಾಯಂದಿರೇ ಬ್ಯಾಂಕ್ ಆಧಾರಸ್ತಂಭ'
ಎಂಪಿಸಿಎಸ್‍ಗಳು ಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆಯಲು ಮೀನಾಮೇಷ ಎಣಿಸುತ್ತಿವೆ, ದೊಡ್ಡವರು ಇಲ್ಲಿ ಠೇವಣಿ ಇಡಲ್ಲ, ಅವರ ಬಗ್ಗೆ ಮಾತಾಡೋದು ವ್ಯರ್ಥ ಆದರೆ ತಾಯಂದಿರೇ ಬ್ಯಾಂಕಿನ ಆಧಾರಸ್ತಂಭವಾಗಿದ್ದು, ನೀವು ಬೇರೆ ಬ್ಯಾಂಕಿನಲ್ಲಿ ಯಾವುದೇ ಕಾರಣಕ್ಕೂ ಉಳಿತಾಯ ಖಾತೆ ಮಾಡದೇ ನಿಮ್ಮ ಬದುಕಿಗೆ ನೆರವಾಗುತ್ತಿರುವ ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಡಿ ಎಂದು ಕರೆ ನೀಡಿದರು.
ಬ್ಯಾಂಕ್ ನಿಮ್ಮನ್ನು ಅಲೆಸೋದಿಲ್ಲ, ನಿಮಗೆ ಹರಿಸಿನ, ಕುಂಕುಮ, ಹೂ ನೀಡಿ ಸ್ವಾಗತಿಸಿ ಸಾಲ ನೀಡುತ್ತೇವೆ ಎಂದ ಅವರು, ಕೇಂದ್ರದಿಂದ ಇನ್ನೂ 40 ಕೋಟಿ ರೂ. ಬಡ್ಡಿ ಹಣ ಬಾಕಿ ಬರಬೇಕಾಗಿದ್ದು, ಪ್ರತಿ ಕುಟುಂಬಕ್ಕೂ ಡಿಸಿಸಿ ಬ್ಯಾಂಕ್ ನೆರವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು.
ಇದೀಗ ವಿಮೆ ತಂದಿದ್ದು, ಪ್ರತಿ ಮಹಿಳೆಗೂ 500 ರೂ. ವಿಮೆ ಹಣ ಪಡೆದು ಅವರು ಸಾಲ ವಾಪಸ್ಸು ಮಾಡದೇ ಮೃತಪಟ್ಟರೆ ಅವರ ಸಾಲವನ್ನು ವಿಮೆ ಹಣದಿಂದ ಮನ್ನಾ ಮಾಡಲು ಕ್ರಮವಹಿಸಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್ ಕುಮಾರ್, ಸುಗಟೂರು ಹೋಬಳಿ ಸೊಸೈಟಿಯಿಂದ ಈವರೆಗೂ 25 ಕೋಟಿ ಸಾಲ ನೀಡಲಾಗಿದೆ, ಇದು ದೊಡ್ಡ ಸಾಧನೆ ಎಂದ ಅವರು, ರಾಜ್ಯದ 20 ಡಿಸಿಸಿ ಬ್ಯಾಂಕುಗಳಲ್ಲಿ ತಾಯಂದಿರಿಗೆ ಸಾಲ ನೀಡಿಕೆಯಲ್ಲಿ ಕೋಲಾರ ಬ್ಯಾಂಕ್ ನಂ.1 ಆಗಿದೆ ಎಂದು ತಿಳಿಸಿದರು.
ನಿರ್ದೇಶಕ ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್‍ನಿಂದ ಪಡೆದ ಸಾಲವನ್ನು ಆದಾಯೋತ್ಪನ್ನ ಚಟುವಟಿಕೆಗಳಿಗೆ ಬಳಸಿ, ದುರ್ಬಳಕೆ ಮಾಡಿಕೊಳ್ಳದಿರಿ, ಬ್ಯಾಂಕ್‍ಗೆ ಪಡೆದ ಸಾಲ ಮರುಪಾವತಿಸಿ ನಂಬಿಕೆ ಉಳಿಸಿಕೊಂಡು ಮತ್ತೆ ಮತ್ತೆ ಸಾಲ ಪಡೆಯಿರಿ ಎಂದು ಸಲಹೆ ನೀಡಿದರು.
ಸ್ವಾಗತಿಸಿದ ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಸುಗಟೂರು ಸೊಸೈಟಿ ಕೇವಲ ಪಡಿತರ ವಿತರಣೆಗೆ ಸೀಮಿತವಾಗಿತ್ತು, ಇದೀಗ 25 ಕೋಟಿ ರೂ ಸಾಲ ವಿತರಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕರಿಗೆ ಅವರು ಧನ್ಯವಾದ ಸಲ್ಲಿಸಿದರು.
ಕಾಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿದೇಶಕರಾದ ಯಲವಾರ ಸೊಣ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ಟಿ.ವಿ.ತಿಮ್ಮರಾಯಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್, ಯೂನಿಯನ್ ನಿರ್ದೇಶಕ ಭಾಸ್ಕರ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾದ ಶಶಿಧರ್, ಕೃಷ್ಣೇಗೌಡ,ತಾಪಂ ಸದಸ್ಯ ಪದ್ಮಾವತಮ್ಮ,ಆಂಜನಮ್ಮ,ಗ್ರಾ.ಪಂ ಅಧ್ಯಕ್ಷರಾದ ಆನಂದ್, ಅಶ್ವಿನಿ, ಮಾಜಿ ಅಧ್ಯಕ್ಷ ವಿಶ್ವನಾಥ್, ಎಸ್‍ಎಫ್‍ಸಿಎಸ್ ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ವೆಂಕಟರಾಮರೆಡ್ಡಿಗೋಪಾಲಪ್ಪ, ವೆಂಕಟರಮಣಪ್ಪ, ವೆಂಕಟಮ್ಮ, ಸವಿತಾ ಶೆಟ್ಟಿ, ಅಮರನಾರಾಯಣ,ಗೋಪಾಲಗೌಡ, ಹನುಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‍ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.








