ಕ್ರಿಕೆಟ್ ಪಂದ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟ ಯುವಕ
ಭುವನೇಶ್ವರ, ಎ.10: ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಸೋಮವಾರ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ 18 ವರ್ಷದ ಯುವಕನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತಪಟ್ಟ ಕ್ರಿಕೆಟಿಗನನ್ನು ಸತ್ಯಜಿತ್ ಪ್ರಧಾನ್ ಎಂದು ಗುರುತಿಸಲಾಗಿದೆ. ಇಲ್ಲಿಗೆ ಸಮೀಪದ ದೆಬಾಬಿಶ್ ಕಾಲೇಜಿನ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಯಾಗಿದ್ದಾನೆೆ. ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಪ್ರಧಾನ್ ಒಂದು ರನ್‌ಗಾಗಿ ಓಡುತ್ತಿದ್ದಾಗ ಪಿಚ್ ಮೇಲೆ ಕುಸಿದುಬಿದ್ದಿದ್ದರು. ತಕ್ಷಣವೇ ಆತನನ್ನು ಜಿಲ್ಲೆಯ ಪ್ರಮುಖ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದರು. ಪ್ರಧಾನ್ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನ ಶವಪರೀಕ್ಷೆ ಮಂಗಳವಾರ ನಡೆಯಲಿದೆ. ಆ ಬಳಿಕವೇ ಸಾವಿಗೆ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





