ಸತತ ಐದು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ್ತಿ ಡಿವೈನ್
ನ್ಯೂಝಿಲ್ಯಾಂಡ್ ಮಹಿಳಾ ತಂಡಕ್ಕೆ 69 ರನ್ ಜಯ, ಸರಣಿ ಕೈವಶ

ವೆಲ್ಲಿಂಗ್ಟನ್, ಫೆ.10: ನ್ಯೂಝಿಲ್ಯಾಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಸೋಮವಾರ ಸತತ ಐದನೇ ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಸಿಡಿಸಿದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. ಡಿವೈನ್ ಶತಕದ ಸಹಾಯದಿಂದ ನ್ಯೂಝಿಲ್ಯಾಂಡ್ ತಂಡ ಸೋಮವಾರ ನಡೆದ ನಾಲ್ಕನೇ ಪಂದ್ಯದಲ್ಲಿ ದ.ಆಫ್ರಿಕಾವನ್ನು 69 ರನ್‌ಗಳಿಂದ ಮಣಿಸಿತು. ಇದರೊಂದಿಗೆ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿ ಸರಣಿ ಗೆದ್ದುಕೊಂಡಿತು. ಐದನೇ ಹಾಗೂ ಅಂತಿಮ ಪಂದ್ಯ ಗುರುವಾರ ಡುನೆಡಿನ್‌ನಲ್ಲಿ ನಡೆಯಲಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ತಂಡ ಆರಂಭಿಕ ಆಟಗಾರ್ತಿ ಡಿವೈನ್ ಶತಕದ(105, 65 ಎಸೆತ, 12 ಬೌಂಡರಿ,3 ಸಿಕ್ಸರ್)ಸಹಾಯದಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಬೇಟ್ಸ್ ಔಟಾಗದೆ 47(46 ಎಸೆತ, 3 ಬೌಂಡರಿ)ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ನೆರವಾದರು.
ಗೆಲ್ಲಲು ಕಠಿಣ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ 17ನೇ ಓವರ್‌ನಲ್ಲಿ 102 ರನ್ ಗಳಿಸಿ ಆಲೌಟಾಗಿದೆ. ಆರಂಭಿಕ ಆಟಗಾರ್ತಿ ಲೀ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್(25)ಗಳಿಸಿದರು. ಅನ್ನಾ ಪೀಟರ್ಸನ್(3-14) ಹಾಗೂ ಜೆಸ್ಸಿಕಾ ಕೆರ್(2-17)ಐದು ವಿಕೆಟ್ ಹಂಚಿಕೊಂಡರು.
30ರ ಹರೆಯದ ಡಿವೈನ್ ಇಂದು ಶತಕ ಸಿಡಿಸುವ ಮೊದಲು ಕಳೆದ ವರ್ಷದ ಫೆಬ್ರವರಿಯಲ್ಲಿ ಭಾರತ ವಿರುದ್ಧ 72 ರನ್ ಗಳಿಸಿದ್ದರು. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯಲ್ಲಿ ಔಟಾಗದೆ 54, 61 ಹಾಗೂ 77 ರನ್ ಗಳಿಸಿದ್ದರು.
ಭಾರತದ ಬ್ಯಾಟ್ಸ್‌ವುಮೆನ್ ಮಿಥಾಲಿ ರಾಜ್, ನ್ಯೂಝಿಲ್ಯಾಂಡ್‌ನ ಪುರುಷರ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಹಾಗೂ ವೆಸ್ಟ್ ಇಂಡೀಸ್‌ನ ಓಪನರ್ ಕ್ರಿಸ್ ಗೇಲ್ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಸತತ ನಾಲ್ಕು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಸಾಧಕರಾಗಿದ್ದಾರೆ.
‘‘ಕಳೆದ 12 ತಿಂಗಳಲ್ಲಿ ಸ್ಥಿರ ಪ್ರದರ್ಶನ ನೀಡಬೇಕೆಂದು ಸ್ವತಃ ಸವಾಲು ಹಾಕಿಕೊಂಡಿದ್ದೆ. ಕೆಲವೇ ವರ್ಷಗಳ ಹಿಂದೆ ನಾನು ಪಂದ್ಯ ಗೆಲ್ಲಲು ಕಾಣಿಕೆ ನೀಡಿದ್ದೆ. ಆದರೆ, ನನ್ನ ಪ್ರದರ್ಶನದಲ್ಲಿ ಸ್ಥಿರತೆ ಇರಲಿಲ್ಲ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವುದು ನನ್ನ ಪಾಲಿಗೆ ವಿಶೇಷ’’ ಎಂದು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಡಿವೈನ್ ಹೇಳಿದ್ದಾರೆ.







