ಶಾಹಿನ್ ಬಾಗ್ ಇರುವ ಓಖ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಆಪ್ ನ ಅಮಾನತುಲ್ಲಾ ಖಾನ್ ಜಯಭೇರಿ
ಬಿಜೆಪಿಗೆ ಮುಖಭಂಗ

ಹೊಸದಿಲ್ಲಿ, ಫೆ. 11: ದಿಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಆಪ್‌ನ ಅಮಾನುತುಲ್ಲಾ ಖಾನ್ ಎರಡನೇ ಬಾರಿ ಜಯ ಗಳಿಸಿದ್ದಾರೆ. ಅವರು ಬಿಜೆಪಿಯ ಬ್ರಹ್ಮ ಸಿಂಗ್ ಅವರನ್ನು 36,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯ ಕೇಂದ್ರವಾಗಿರುವ ಶಾಹೀನ್ ಬಾಗ್ ಹಾಗೂ ಜಾಮಿಯಾ ನಗರ ಓಖ್ಲಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಶಾಹೀನ್ ಬಾಗ್‌ನಲ್ಲಿ ಕಳೆದು ಸುಮಾರು ಎರಡು ತಿಂಗಳಿಂದ ಮಹಿಳೆಯರು ಮಕ್ಕಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿಂದ ಎರಡು ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಜಾಮಿಯ ನಗರದ ಸ್ಥಳೀಯರ ಬೆಂಬಲದೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಡಿಸೆಂಬರ್ 15ರಂದು ವಿರುದ್ಧ ವಿ.ವಿ.ಯ ಹೊರಗೆ ಪ್ರತಿಭಟನೆ ನಡೆಸಿದ್ದರು.
ಈ ನಡುವೆ ಚುನಾವಣೆಗೆ ಮುನ್ನ ಇಲ್ಲಿ ಮೂರು ಗುಂಡು ಹಾರಿಸಿದ ಘಟನೆಗಳು ನಡೆದಿವೆ. ಇದರಲ್ಲಿ ವಿಶ್ವವಿದ್ಯಾನಿಲಯದ ಒಳಗೆ ಗುಂಡು ಹಾರಿಸಿದ ಎರಡು ಘಟನೆಗಳು ಕೂಡ ಸೇರಿವೆ. ಎರಡು ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಧಾನ ಸಭೆ ಚುನಾವಣಾ ಸಂದರ್ಭ ಶಾಹೀನ್ ಬಾಗ್ ಪ್ರಚಾರದ ಕೇಂದ್ರವಾಗಿತ್ತು. ಓಕ್ಲಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಚಾರ ನಡೆಸಿದ್ದರು. ಶಾಹಿನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದರಿಂದ ದಿಲ್ಲಿ ಚುನಾವಣಾ ಆಯೋಗ ಈ ಪ್ರದೇಶದಲ್ಲಿ ಬರುವ 5 ಮತಗಟ್ಟೆಗಳನ್ನು ‘ಗಂಭೀರ ವರ್ಗ’ಕ್ಕೆ ಸೇರಿಸಿತ್ತು.







