ಸರಕಾರ ಲಿಖಿತ ಭರವಸೆ ನೀಡಿದರೆ 'ಕರ್ನಾಟಕ ಬಂದ್' ವಾಪಸ್:
ಕನ್ನಡ ಒಕ್ಕೂಟ ಸಂಘಟನೆಗಳ ಅಧ್ಯಕ್ಷ ಎಚ್.ಪಿ.ನಾಗೇಶ್
ಬೆಂಗಳೂರು, ಫೆ.11: ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಪೂರಕವಾಗಿರುವಂತಹ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಸಂಬಂಧಿಸಿದಂತೆ ಸರಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಫೆ.13ರಂದು ಕರೆ ನೀಡಿರುವ ರಾಜ್ಯ ಬಂದ್ ಅನ್ನು ವಾಪಸ್ ಪಡೆಯಲಾಗುವುದು ಎಂದು ಕನ್ನಡ ಒಕ್ಕೂಟ ಸಂಘಟನೆಗಳ ಅಧ್ಯಕ್ಷ ಎಚ್.ಪಿ.ನಾಗೇಶ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಂದ್ ಮಾಡಿ ಸಮಸ್ಯೆ ಕೊಡುವುದು ನಮ್ಮ ಉದ್ದೇಶವಲ್ಲ. ಆದರೆ, ಸರೋಜಿನಿ ಮಹಿಷಿ ವರದಿ ಇರುವುದು ಕನ್ನಡಿಗರಿಗಾಗಿ. ಇದಕ್ಕಾಗಿ ನಮ್ಮದೇ ಸರಕಾರದ ವಿರುದ್ಧ ಹೋರಾಟ ಮಾಡಬೇಕಿರುವುದು ದುರಂತವಾಗಿದೆ. ಈಗಲೂ ಸರಕಾರ ವರದಿ ಜಾರಿಗೆ ಸಂಬಂಧಿಸಿದಂತೆ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮಾತ್ರ ಬಂದ್ ವಾಪಸ್ ಪಡೆಯಲಾಗುವುದು ಎಂದು ಹೇಳಿದರು.
ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕೆನ್ನುವುದು ಕನ್ನಡಪರ ಸಂಘಟನೆಗಳ ಹಲವು ದಶಕಗಳ ಹೋರಾಟವಾಗಿದೆ. ಸರಕಾರಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಹಲವು ಭಾರಿ ಚರ್ಚಿಸಿ, ವರದಿ ಜಾರಿಯ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಆದರೂ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
700 ಸಂಘಟನೆಗಳ ಬೆಂಬಲ: ವರದಿ ಜಾರಿಗೆ ಸಂಬಂಧಿಸಿದಂತೆ ಸರಕಾರ ಲಿಖಿತ ರೂಪದಲ್ಲಿ ಭರವಸೆ ನೀಡದಿದ್ದರೆ, ಫೆ.13ರಂದು ಬಂದ್ ಯಶಸ್ವಿಯಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ರಾಜ್ಯ ಬಂದ್‌ಗೆ ರಾಜ್ಯಾದ್ಯಂತ ಸುಮಾರು 700 ಸಂಘಟನೆಗಳು ಬೆಂಬಲ ಸೂಚಿಸಿವೆ. ಯಾರಿಗೂ ತೊಂದರೆಯಾಗದಂತೆ ಬಂದ್ ನಡೆಸಲು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆಂದು ಅವರು ಮಾಹಿತಿ ನೀಡಿದರು.
ಫೆ.13ರಂದು ರಾಜ್ಯದ ವಿವಿಧ ಭಾಗಗಳಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಬೆಳಗ್ಗೆ ಟೌನ್‌ಹಾಲ್‌ನಿಂದ ನಗರದ ಸ್ವಾತಂತ್ರ ಉದ್ಯಾನದವರೆಗೆ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.
ಓಲಾ ಮತ್ತು ಊಬರ್ ಚಾಲಕರು ಹಾಗೂ ಮಾಲಕರ ಸಂಘ, ಲಾರಿ ಮಾಲಕರ ಸಂಘ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘ, ಆದರ್ಶ ಆಟೋ ಯೂನಿಯನ್, ಪೀಸ್ ಆಟೋ ಯೂನಿಯನ್, ಜೈ ಭಾರತ ಚಾಲಕರ ಸಂಘ, ಜೈ ಕರವೇ ಚಾಲಕ ಸಂಘ, ಸಾರಥಿ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಣೆ ಮಾಡಿವೆ.
ಬೆಂಬಲವಿಲ್ಲ
ಕರ್ನಾಟಕ ಬಂದ್‌ಗೆ ನಮ್ಮ ಸಂಘವು ಬೆಂಬಲ ನೀಡುವುದಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್‌ಗಳನ್ನು ತೆರೆಯಲಾಗುತ್ತದೆ. ಎಲ್ಲಾ ಹೊಟೇಲ್ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
-ಪಿ.ಸಿ.ರಾವ್, ಹೊಟೇಲ್‌ಗಳ ಸಂಘದ ಅಧ್ಯಕ್ಷ, ಬೆಂಗಳೂರು







