ತಿರುಗುಬಾಣವಾದ ಪರ್ವೇಶ್ ವರ್ಮರ ದ್ವೇಷ ಭಾಷಣ: ಪ.ದಿಲ್ಲಿಯ 10 ಸ್ಥಾನಗಳಲ್ಲಿ ಬಿಜೆಪಿಗೆ ಸೋಲು

ಹೊಸದಿಲ್ಲಿ, ಫೆ.11: ಪಶ್ಚಿಮ ದಿಲ್ಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮ ಚುನಾವಣಾ ಪ್ರಚಾರದ ಸಂದರ್ಭ ಮಾಡಿದ್ದ ದ್ವೇಷ ಭಾಷಣ ಪಕ್ಷಕ್ಕೆ ತಿರುಗುಬಾಣವಾಗಿ ಪರಿಣಮಿಸಿದ್ದು, ಈ ಸಂಸದೀಯ ಕ್ಷೇತ್ರದ ಎಲ್ಲಾ 10 ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಒಂದು ವಾರದಲ್ಲಿ ಎರಡು ಬಾರಿ ಚುನಾವಣಾ ಆಯೋಗದಿಂದ ನಿರ್ಬಂಧಕ್ಕೆ ಒಳಗಾಗಿದ್ದ ಪರ್ವೇಶ್ ವರ್ಮ ಶಾಹೀನ್‌ಬಾಗ್ ಪ್ರತಿಭಟನಾಕಾರರನ್ನು ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಎಂದು ಬಣ್ಣಿಸಿದ್ದರು. ಶಹೀನ್‌ಬಾಗ್‌ನ ಜನತೆ ಸರತಿ ಸಾಲಿನಲ್ಲಿ ನಿಂತು ಆಪ್‌ಗೆ ಮತ ಚಲಾಯಿಸುವುದಾದರೆ, ದಿಲ್ಲಿಯ ಜನತೆ ಕೂಡಾ ತಮ್ಮ ಮನೆಗಳಿಂದ ಹೊರಬಂದು ರಾಷ್ಟ್ರೀಯತಾವಾದಿ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ವರ್ಮ ಟ್ವೀಟ್ ಮಾಡಿದ್ದರು. ಅಲ್ಲದೆ ಮೋದಿ ಸರಕಾರ ಸಕ್ರಮಗೊಳಿಸಿದ 1,700 ಅನಧಿಕೃತ ಕಾಲೊನಿಗಳ ವಿಷಯವನ್ನೂ ವರ್ಮ ತಮ್ಮ ಪ್ರಚಾರ ಭಾಷಣದಲ್ಲಿ ಉಲ್ಲೇಖಿಸಿದ್ದರು. ಇದರಲ್ಲಿ ಬಹುತೇಕ ಕಾಲೊನಿಗಳು ಪಶ್ಚಿಮ ದಿಲ್ಲಿ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿವೆ.
ಜನವರಿ 28ರಂದು ಮತ್ತೊಂದು ವಿವಾದಾತ್ಮಕ ಟ್ವೀಟ್ ಮಾಡಿದ್ದ ವರ್ಮ, ಶಾಹೀನ್‌ಬಾಗ್‌ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತ್ತಿರುವವರನ್ನು ಕಾಶ್ಮೀರದ ಭಯೋತ್ಪಾದಕರಿಗೆ ಹೋಲಿಸಿದ್ದರು. ಅಲ್ಲದೆ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ತನ್ನ ಕ್ಷೇತ್ರದಲ್ಲಿ ಸರಕಾರಿ ಭೂಮಿಯಲ್ಲಿ ನಿರ್ಮಿಸಿರುವ ಮಸೀದಿಗಳನ್ನು ನೆಲಸಮಗೊಳಿಸುವುದಾಗಿ ಭರವಸೆ ನೀಡಿದ್ದರು.





