ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಿರುಕುಳಕ್ಕೊಳಗಾಗುವ ಪ್ರಯಾಣಿಕರು ಮಾಹಿತಿ ನೀಡಲು ಎಸ್‌ಡಿಪಿಐ ಮನವಿ
ಮಂಗಳೂರು, ಫೆ.11: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ನೆಪದಲ್ಲಿ ಅಧಿಕಾರಿಗಳು ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯು ಇದರ ವಿರುದ್ಧ ಪ್ರತಿಭಟನೆ ಮತ್ತು ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಅಲ್ಲದೆ ಅನಗತ್ಯ ಕಿರುಕುಳ ನೀಡುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಮುಸ್ಲಿಂ ಸಮುದಾಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ವಿಮಾನ ನಿಲ್ದಾಣದ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇದು ಅಧಿಕಾರಿಗಳ ಕೋಮುವಾದಿ ಧೋರಣೆಗೆ ಸಾಕ್ಷಿಯಾಗಿದೆ. ಇಂತಹ ಘಟನೆಗಳನ್ನು ಖಂಡಿಸಿ ಎಸ್‌ಡಿಪಿಐ ಸಹಿತ ಅನೇಕ ಸಂಘಟನೆಗಳು ಹಲವು ಬಾರಿ ಪ್ರತಿಭಟಿಸಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮನವಿ ನೀಡಿದೆ. ಈ ಸಂದರ್ಭ ಹಿರಿಯ ಅಧಿಕಾರಿಗಳ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಕೂಡ ಕಿರುಕುಳ ಮುಂದುವರಿದಿದೆ. ಈ ವಿಮಾನ ನಿಲ್ದಾಣದಿಂದ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಇಲ್ಲಿನ ಕೆಲವು ಅಧಿಕಾರಿಗಳ-ಕೆಲಸದಾಳುಗಳ ಕೋಮುವಾದಿ ಧೋರಣೆಯಿಂದಾಗಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯು ಕಡಿಮೆಯಾಗುತ್ತಿದೆ. ಅಧಿಕಾರಿಗಳ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಿರುಕುಳಕ್ಕೊಳಗಾದ ಪ್ರಯಾಣಿಕರು ಅಧಿಕಾರಿಗಳ ಹೆಸರು, ದಿನಾಂಕ, ಸಮಯ ಇತ್ಯಾದಿ ಸಂಪೂರ್ಣ ವಿವರದೊಂದಿಗೆ ಪಕ್ಷದ ನಾಯಕರು ಅಥವಾ ಪಕ್ಷದ ಕಚೇರಿಗೆ (2ನೆ ಮಹಡಿ, ವೆಸ್ಟ್ಕೋಸ್ಟ್ ಬಿಲ್ಡಿಂಗ್, ನೆಲ್ಲಿಕಾಯಿ ರಸ್ತೆ, ಸ್ಟೇಟ್‌ಬ್ಯಾಂಕ್ ಬಳಿ, ಮಂಗಳೂರು) ನೀಡಬಹುದು. ಈ ದೂರಿನ ಆಧಾರದ ಮೇಲೆ ಕಾನೂನು ಹೋರಾಟ ಮಾಡಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





