ಪ್ರಶಸ್ತಿಯ ಆಯ್ಕೆಗೆ ಆಕ್ಷೇಪ ಸರಿಯಲ್ಲ: ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ನಂದೀಶ್ ಅಂಚೆ
2018ನೇ ಸಾಲಿನ ವಿವಿಧ ಪ್ರಶಸ್ತಿ ಪ್ರದಾನ

ಬೆಂಗಳೂರು, ಫೆ.11: ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಪ್ರಶಸ್ತಿಗಳ ಆಯ್ಕೆ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡುವುದು ಸರಿಯಲ್ಲವೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಅಂಚೆ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರವು ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯ ಹಾಗೂ ಸಂಸ್ಕೃತಿ ಕ್ಷೇತ್ರದವರು ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ತಿಳಿಸಿದರು.
ಪುಸ್ತಕ ಪ್ರಾಧಿಕಾರದ 2018ನೇ ಸಾಲಿನ ಪ್ರಶಸ್ತಿ ಆಯ್ಕೆ ಸಮಿತಿಯಿಂದ ನಾನು ಸಂಪೂರ್ಣವಾಗಿ ಹೊರಗಿದ್ದೆ. ಆಯ್ಕೆ ಸಮಿತಿ ತಯಾರಿಸಿದ ಪಟ್ಟಿಯನ್ನು ಅನುಮೋದಿಸಿದ್ದೇನಷ್ಟೆ. ಆದರೂ ಕೆಲವರಿಂದ ಟೀಕೆ ವ್ಯಕ್ತವಾಗಿರುವುದಕ್ಕೆ ಬೇಸರವಾಗಿದೆ ಎಂದು ಅವರು ವಿಷಾದಿಸಿದರು.
ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಪ್ರೊ.ಎಂ.ರಾಮಚಂದ್ರ ಕಾರ್ಕಳ ಹೆಸರು ಆಯ್ಕೆ ಪಟ್ಟಿಯಲ್ಲಿರಲಿಲ್ಲ. ಇವರ ಹೆಸರನ್ನು ಯಾರೂ ಸೂಚಿಸಿಯೂ ಇರಲಿಲ್ಲ. ಆದರೆ, ನಾನು ಇವರ ಹೆಸರನ್ನು ಕೆಲವು ಹಿರಿಯ ಬಳಿ ಪ್ರಸ್ತಾಪಿಸಿದಾಗ, ಒಳ್ಳೆಯ ಆಯ್ಕೆಯೆಂದು ಸಂತೋಷದಿಂದ ಸಮ್ಮತಿ ಸೂಚಿಸಿದರು. ಒಟ್ಟಾರೆ ಅರ್ಹರಿಗೆ ಪ್ರಶಸ್ತಿ ಸಿಗಬೇಕೆಂಬುದು ನಮ್ಮೆಲ್ಲರ ಸದುದ್ದೇಶವಾಗಿರಬೇಕೆಂದು ಅವರು ಹೇಳಿದರು.
ಈ ವೇಳೆ ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ, ರಾಜರತ್ನಂ ಪರಿಚಾರಕ ಪ್ರಶಸ್ತಿ ಹಾಗೂ ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಪುಸ್ತಕ ಸೊಗಸು, ಪುಸ್ತಕ ಮುದ್ರಣ ಸೊಗಸು ಬಹುಮಾನ ನೀಡಲಾಯಿತು.







