ಅನುಮತಿ ಇಲ್ಲದೆ ಭಾರತದ ಕಬಡ್ಡಿ ಆಟಗಾರರು ಪಾಕ್‌ಗೆ ಪಯಣ
ತನಿಖೆಗೆ ಕ್ರೀಡಾ ಸಚಿವಾಲಯ ಚಿಂತನೆ
ಹೊಸದಿಲ್ಲಿ, ಫೆ.11: ಸರಕಾರದಿಂದ ಯಾವುದೇ ಅನುಮತಿ ಪಡೆಯದೇ ಸರ್ಕಲ್ ಶೈಲಿಯ ಕಬಡ್ಡಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಿರುವ ಭಾರತೀಯ ಕಬಡ್ಡಿ ತಂಡದ ವಿರುದ್ಧ ತನಿಖೆ ನಡೆಸಲು ಕ್ರೀಡಾ ಸಚಿವಾಲಯ ಚಿಂತನೆ ನಡೆಸಿದೆ. ಭಾರತ ಕಬಡ್ಡಿ ಆಟಗಾರರ ಈ ನಡೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. 12 ಅಧಿಕಾರಿಗಳು ಹಾಗೂ ಕೋಚ್‌ಗಳ ಸಹಿತ ಸುಮಾರು 45 ಜನರಿದ್ದ ಕಬಡ್ಡಿ ತಂಡ ನೆರೆಯ ರಾಷ್ಟ್ರಕ್ಕೆ ಅಧಿಕೃತ ಅನುಮತಿ ಇಲ್ಲದೇ ತೆರಳಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಈ ಕುರಿತು ಕ್ರೀಡಾ ಸಚಿವ ಕಿರಣ್ ರಿಜಿಜು ತನಿಖೆ ನಡೆಸಲು ಸಜ್ಜಾಗಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಕಬಡ್ಡಿ ಆಟಗಾರರು ಭಾರತಕ್ಕೆ ವಾಪಸಾದ ಬಳಿಕವಷ್ಟೇ ಶಿಸ್ತು ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಲ್ ಕಬಡ್ಡಿಯು ಸ್ಟಾಂಡರ್ಡ್ ಕಬಡ್ಡಿಗಿಂತ ಸ್ವಲ್ಪ ಭಿನ್ನವಾಗಿದೆ. ಇದು ಏಶ್ಯನ್ ಗೇಮ್ಸ್‌ನ ಭಾಗವಾಗಿದೆ. ಸ್ಟಾಂಡರ್ಡ್ ಮಾದರಿಯ ಕಬಡ್ಡಿಯಲ್ಲಿ ಪ್ರತಿ ತಂಡದಲ್ಲಿ 80 ಕೆಜಿ ತೂಕಗಿಂತ ಕೆಳಗಿನ ಏಳು ಆಟಗಾರರು ಇರುತ್ತಾರೆ. ಸರ್ಕಲ್ ಕಬಡ್ಡಿಯಲ್ಲಿ ಯಾವುದೇ ತೂಕದ ನಿರ್ಬಂಧ ಇರುವುದಿಲ್ಲ. ಇದರಲ್ಲಿ 8 ಆಟಗಾರರು ಭಾಗವಹಿಸುತ್ತಾರೆ. ಸರ್ಕಲ್‌ನಲ್ಲಿ ಆಡುತ್ತಾರೆ.
ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಯಾವುದೇ ಕಬಡ್ಡಿ ತಂಡದ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಸೋಮವಾರ ಸ್ಪಷ್ಟಪಡಿಸಿದೆ.
ಭಾರತದ ಕಬಡ್ಡಿ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಶನಿವಾರ ವಾಘಾ ಗಡಿಯ ಮೂಲಕ ಲಾಹೋರ್‌ಗೆ ತೆರಳಿದೆ. ಭಾರತದ ಆಟಗಾರರು ಲಾಹೋರ್‌ಗೆ ಆಗಮಿಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.





