ಟ್ವೆಂಟಿ-20 ಕ್ರಿಕೆಟ್‌ನಿಂದ ನಿವೃತ್ತಿಯ ಸುಳಿವು ನೀಡಿದ ವಾರ್ನರ್
ಸಿಡ್ನಿ, ಫೆ.11: ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ದೀರ್ಘ ಸಮಯ ಆಡುವ ಉದ್ದೇಶದಿಂದ ಹಾಗೂ ಮೂವರು ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುವುದಕ್ಕಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಟ್ವೆಂಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗುವೆ ಎಂದು ಆಸ್ಟ್ರೇಲಿಯದ ಹೊಡಿಬಡಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೇಳಿದ್ದಾರೆ. 33ರ ಹರೆಯದ ವಾರ್ನರ್ ಕ್ರಿಕೆಟ್ ಆಸ್ಟ್ರೇಲಿಯ ವರ್ಷದ ಆಟಗಾರನಿಗೆ ನೀಡುವ ಅಲನ್ ಬಾರ್ಡರ್ ಪದಕಕ್ಕೆ ಆಯ್ಕೆಯಾಗಿದ್ದರು. ಮೂರನೇ ಬಾರಿ ಅಲನ್ ಬಾರ್ಡರ್ ಪದಕ ಜಯಿಸಿದ ವಾರ್ನರ್ ಪದಕ ಸ್ವೀಕಾರ ಸಮಾರಂಭದ ವೇಳೆ ಭಾವೋದ್ವೇಗಕ್ಕೆ ಒಳಗಾದರು. ವಾರ್ನರ್ ವರ್ಷದ ಟ್ವೆಂಟಿ-20 ಆಟಗಾರ ಪ್ರಶಸ್ತಿಗೂ ಭಾಜನರಾದರು.
ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ವಾರ್ನರ್ ಸರಾಸರಿ 40ಕ್ಕೂ ಅಧಿಕವಿದೆ. ಟ್ವೆಂಟಿ-20ಯಲ್ಲಿ ಸ್ಟ್ರೈಕ್‌ರೇಟ್ 140. ಇನ್ನು ಎರಡು ಟ್ವೆಂಟಿ-20 ವಿಶ್ವಕಪ್‌ಟೂರ್ನಿಗಳು ಆಸ್ಟ್ರೇಲಿಯ(ಈ ವರ್ಷ)ಹಾಗೂ ಭಾರತ(ಮುಂದಿನ ವರ್ಷ)ದಲ್ಲಿ ನಡೆಯಲಿಕ್ಕಿದೆ. ‘‘ನಾನು ಎಬಿಡಿವಿಲಿಯರ್ಸ್, ವೀರೇಂದ್ರ ಸೆಹ್ವಾಗ್‌ರಂತಹ ಆಟಗಾರರೊಂದಿಗೆ ಮಾತನಾಡಿದ್ದು, ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದರಿಂದ ಎಷ್ಟು ಆಯಾಸವಾಗುತ್ತದೆ ಎಂಬ ಕುರಿತು ಚರ್ಚಿಸಿದ್ದೇನೆ. ನನ್ನ ಮೂವರು ಚಿಕ್ಕ ಮಕ್ಕಳು ಹಾಗೂ ಪತ್ನಿ ಮನೆಯಲ್ಲಿರುತ್ತಾರೆ. ಅವರನ್ನು ಬಿಟ್ಟು ಪ್ರಯಾಣದಲ್ಲೇ ಸಮಯ ಕಳೆಯುವುದಕ್ಕೆ ತುಂಬಾ ಕಷ್ಟವಾಗುತ್ತದೆ’’ ಎಂದು ಮೂವರು ಪುತ್ರಿಯರ ತಂದೆಯಾಗಿರುವ ವಾರ್ನರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಚೆಂಡುವಿರೂಪ ಪ್ರಕರಣದಲ್ಲಿ ಸಿಲುಕಿದ ಬಳಿಕ ಎರಡು ವರ್ಷಗಳ ಕಾಲ ಸಂಕಷ್ಟದ ದಿನ ಎದುರಿಸಿದ್ದ ವಾರ್ನರ್ ಕಳೆದ ವರ್ಷದ ನವೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 335)ಗಳಿಸಿದ್ದರು.







