ಧೋನಿಯ ಅಪರೂಪದ ದಾಖಲೆ ಸರಿಗಟ್ಟಿದ ಕೆ.ಎಲ್.ರಾಹುಲ್

ವೌಂಟ್‌ವೌಂಗಾನುಯಿ, ಫೆ.11: ನ್ಯೂಝಿಲ್ಯಾಂಡ್ ವಿರುದ್ಧ ಮಂಗಳವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಐದನೇ ಕ್ರಮಾಂಕದಲ್ಲಿ ಶತಕ ಸಿಡಿಸುವ ಮೂಲಕ ಮಾಜಿ ನಾಯಕ ಎಂಎಸ್ ಧೋನಿ ಅವರ ಅಪರೂಪದ ದಾಖಲೆಯನ್ನು ಸರಿಗಟ್ಟಿದರು.
ಧೋನಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಕಟಕ್‌ನಲ್ಲಿ ಈ ಸಾಧನೆ ಮಾಡಿದ್ದರು.
ಭಾರತ 62 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಇಳಿದ ರಾಹುಲ್ 113 ಎಸೆತಗಳಲ್ಲಿ 112 ರನ್ ಕಲೆ ಹಾಕಿ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಲು ನೆರವಾದರು.
ಧೋನಿ ಮೂರು ವರ್ಷಗಳ ಹಿಂದೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ವಿರುದ್ಧ 134 ರನ್ ಗಳಿಸಿದ್ದರು. ಧೋನಿ ಸಾಹಸದ ನೆರವಿನಿಂದ ಭಾರತ 6 ವಿಕೆಟ್‌ಗಳ ನಷ್ಟಕ್ಕೆ 381 ರನ್ ಗಳಿಸಿತ್ತು. ಆತಿಥೇಯ ಭಾರತ 15 ರನ್‌ನಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ನ್ಯೂಝಿಲ್ಯಾಂಡ್ ಕ್ರಿಕೆಟ್ ಪ್ರವಾಸದಲ್ಲಿ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.ನ್ಯೂಝಿಲ್ಯಾಂಡ್‌ನಲ್ಲಿ ಚೊಚ್ಚಲ ಶತಕ ಸಿಡಿಸುವ ಮೊದಲು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.
50 ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ಎರಡನೇ ಅತ್ಯಂತ ವೇಗದಲ್ಲಿ ನಾಲ್ಕನೇ ಶತಕ ಸಿಡಿಸಿದ ಕರ್ನಾಟಕದ ಬ್ಯಾಟ್ಸ್ ಮನ್ ರಾಹುಲ್ ಅವರು ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ದಾಖಲೆಯನ್ನು ಹಿಂದಿಕ್ಕಿದರು. ರಾಹುಲ್ 31ನೇ ಇನಿಂಗ್ಸ್‌ನಲ್ಲಿ ಮೊದಲ ನಾಲ್ಕು ಶತಕ ಗಳಿಸಿದರೆ, ಶಿಖರ್ ಧವನ್ 24 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
27ರ ಹರೆಯದ ರಾಹುಲ್ ಏಶ್ಯದ ಹೊರಗೆ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಳ್ಳುವುದರೊಂದಿಗೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್‌ರ ಇಲೈಟ್ ಕಂಪೆನಿಗೆ ಸೇರ್ಪಡೆಯಾದರು. ಭಾರತ 3 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಶ್ರೇಯಸ್ ಅಯ್ಯರ್ ಜೊತೆ ಕೈಜೋಡಿಸಿದ ರಾಹುಲ್ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಈ ಜೋಡಿ 4ನೇ ವಿಕೆಟ್‌ಗೆ ಬರೋಬ್ಬರಿ 100 ರನ್ ಸೇರಿಸಿತು. 47ನೇ ಓವರ್‌ನಲ್ಲಿ ಬೆನೆಟ್‌ಗೆ ವಿಕೆಟ್ ಒಪ್ಪಿಸುವ ಮೊದಲು ಮನೀಷ್ ಪಾಂಡೆ ಜೊತೆಗೆ 5ನೇ ವಿಕೆಟ್‌ಗೆ ಮತ್ತೊಂದು ಶತಕದ ಜೊತೆಯಾಟದಲ್ಲಿ ಭಾಗಿಯಾದರು.







