ರಾಜಕಾರಣಿಗಳಿಗೆ ವಚನ ಸಾಹಿತ್ಯ ಕಾರ್ಯಾಗಾರದ ಅಗತ್ಯವಿದೆ: ನಟರಾಜ ಹುಳಿಯಾರ್
ಬೆಂಗಳೂರು, ಫೆ.11: ಸ್ತುತಿ ಮತ್ತು ನಿಂದನೆಯನ್ನು ಸಮಚಿತ್ತದಿಂದ ಸ್ವೀಕರಿಸದ ಇಂದಿನ ರಾಜಕಾರಣಿಗಳಿಗೆ ವಚನ ಸಾಹಿತ್ಯ ಕಾರ್ಯಾಗಾರದ ಅವಶ್ಯಕತೆ ಇದೆ ಎಂದು ಸಂಸ್ಕೃತಿ ಚಿಂತಕ ನಟರಾಜ ಹುಳಿಯಾರ್ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯ ಕೇಂದ್ರದ ಸಹಯೋಗದೊಂದಿಗೆ ಜ್ಞಾನಭಾರತಿ ಆವರಣದ ಪ್ರೊ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ’ವಚನ ಸಾಹಿತ್ಯ- ಬಹುಶಾಸ್ತ್ರೀಯ ನೆಲೆ’ ವಿಚಾರಕ್ಕೆ ಸಂಬಂಧಿಸಿದ ಐದು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚರಿತ್ರೆಯಲ್ಲಿ ನಿಂದನೆಗೊಳಗಾಗದವರು ಯಾರೂ ಇಲ್ಲ. ಬುದ್ಧ, ಬಸವಣ್ಣ, ಗಾಂಧಿ ಎಲ್ಲರೂ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದವರೆ. ಹೊಗಳಿಕೆಯನ್ನು ಸ್ವೀಕರಿಸಿದಂತೆ ತೆಗಳಿಕೆಯನ್ನು ಸಮಭಾವದಿಂದ ಒಪ್ಪಬೇಕು. ಆತ್ಮ ವಿಮರ್ಶೆಗೂ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ವಚನಗಳು ಭೂತ ಕಾಲದ ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನು ಬಿಂಬಿಸುವ ರೂಪಕಗಳಾಗಿವೆ. ವಚನ ಶಾಸ್ತ್ರೀಯ ಪ್ರಾಕಾರವೇ ಬಹುಶಿಸ್ತಿನಿಂದ ರೂಪುಗೊಂಡಿದ್ದು, ಇದನ್ನು ಒಂದೇ ಆಯಾಮದಲ್ಲಿ ವಿಶ್ಲೇಷಿಸುವುದು ಸೂಕ್ತವಲ್ಲ. ವಚನ ಸಾಹಿತ್ಯಕ್ಕೆ ತಳವರ್ಗದವರ ಕೊಡುಗೆ ಅಪಾರವಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ಆದರ್ಶ ವ್ಯಕ್ತಿತ್ವ ಹೊಂದಿರುವವರು ನಮಗೆ ಗುರುವಾಗುತ್ತಾರೆ. ರಾಮ, ಕೃಷ್ಣ, ಯೇಸು, ಗಾಂಧಿ, ಅಂಬೇಡ್ಕರ್ ಮುಂತಾದವರು ಈ ಸಾಲಿಗೆ ಸೇರುತ್ತಾರೆಂದು ತಿಳಿಸಿದರು.
ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಬಿ.ಗಂಗಾಧರ್ ಮಾತನಾಡಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ. ಕೆ.ಆರ್. ದುರ್ಗಾದಾಸ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.







