ಜಮೀನು ವಿವಾದಕ್ಕೆ ಬೇಸರ: ದಯಾಮರಣಕ್ಕೆ ಅನುಮತಿಗೆ ಸೈನಿಕ ಮನವಿ
ಮಂಡ್ಯ, ಫೆ.11: ಜಮೀನು ವಿವಾದದಿಂದ ನಲುಗಿರುವ ಸೈನಿಕ ಮತ್ತು ಅವರ ಸಹೋದರ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದು, ಇಲ್ಲವಾದರೆ ದಯಾಮರಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಪಾಂಡವಪುರ ತಾಲೂಕು ಮೇನಾಗರ ಗ್ರಾಮದ ಸೈನಿಕ ಕಿಶೋರ್ ಹಾಗೂ ಸಹೋದರ ಕಿರಣ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಜಮೀನು ವಿವಾದ ಕುರಿತಂತೆ ಮಾಹಿತಿ ನೀಡಿ ನ್ಯಾಯ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡರು.
ಗ್ರಾಮದ ಸರ್ವೆ ನಂ.61ರಲ್ಲಿ 12.20 ಎಕರೆ ಪಿತ್ರಾರ್ಜಿತ ಜಮೀನಿದ್ದು, ಇದರಲ್ಲಿ ನಮಗೆ 3.4 ಎಕರೆ ಬಂದಿದೆ. ಆದರೆ, ಸುಂಕಾತೊಣ್ಣೂರು ಗ್ರಾಮದ ನಾಗರಾಜು ಮತ್ತು ಮಕ್ಕಳು ಜಮೀನು ತಮಗೆ ಸೇರಿದೆ ಎಂದು ಗಲಾಟೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜಮೀನು ನಮಗೆ ಸೇರಿದ ಬಗ್ಗೆ ದಾಖಲಾತಿಗಳು ಇವೆ. ಪೊಲೀಸರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರಿಗೂ ದೂರು ನೀಡಲಾಗಿದೆ. ನ್ಯಾಯಾಲಯದಲ್ಲೂ ಪ್ರಕರಣ ನಡೆಯುತ್ತಿದೆ. ಆದರೆ, ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಅವರು ದೂರಿದರು.
ನಾನು ಜಮ್ಮು ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದು, ಜಮೀನು ಸಮಸ್ಯೆ ಬಗೆಹರಿಸುವಂತೆ ಸೇನಾ ಇಲಾಖೆಯಿಂದ ಪತ್ರ ಬಂದಿದೆ. ಆದರೂ ಸಂಬಂಧಿಸಿದವರು ಸ್ಪಂದಿಸುತ್ತಿಲ್ಲ ಎಂದು ಕಿಶೋರ್ ಆಪಾದಿಸಿದರು. ಈಗಲಾದರೂ ಜಿಲ್ಲಾಡಳಿತ ಗಮನಹರಿಸಿ ನಮ್ಮ ಜಮೀನು ಅನುಭವಕ್ಕೆ ತೊಂದರೆ ಕೊಡುತ್ತಿರುವವರ ವಿರುದ್ಧ ಕ್ರಮ ಜರುಗಿಸಿ ನ್ಯಾಯ ಕೊಡಿಸಬೇಕು. ಇಲ್ಲವಾದರೆ, ದಯಾಮರಣಕ್ಕೆ ಅನುಮತಿಯನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.







