ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಿ: ಮಂಡ್ಯ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ
ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಮಂಡ್ಯ, ಫೆ.11: ದೇಶದಾದ್ಯಂತ ಕೊರೋನಾ ವೈರಸ್‍ನ ಭೀತಿ ಹೆಚ್ಚಾಗಿರುವುದರಿಂದ, ಜಿಲ್ಲೆಯಲ್ಲಿಯೂ ಸಹ ಕೊರೋನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ನಾಗರತ್ನ ಸ್ವಾಮಿ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿ ಮಗಳವಾರ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ವೈರಸ್‍ಗೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ವಾರ್ಡ್‍ಗಳನ್ನು ತೆರೆಯಬೇಕು. ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಪ್ರತಿ ತಾಲೂಕಿನಲ್ಲಿ ಸೂಕ್ತ ವೈದ್ಯರನ್ನು ನೇಮಿಸಬೇಕು. ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಪೂರಕವಾದ ಸಲಕರಣೆಗಳು ಇರಬೇಕು. ಬೇಸಗೆ ಕಾಲದಲ್ಲಿ ಕಾಯಿಲೆಗಳು ಹೆಚ್ಚಾಗಿ, ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಕ್ತವಾದ ಕ್ರಮಕೈಗೊಂಡು ರೋಗ ಹರಡದಂತೆ ನೋಡಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆಯಲ್ಲಿರುವ ಡಿ ಗ್ರೂಪ್ ನೌಕರರಿಗೆ ನೀಡಬೇಕಾಗಿರುವ ವೇತನವನ್ನು ಶೀಘ್ರದಲ್ಲಿ ನೀಡಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳು ಇರುವ ಕೆಲವು ಸರಕಾರಿ ಪ್ರೌಢಶಾಲೆಗಳಲ್ಲಿ ಶೌಚಾಲಯ ಕೊರತೆ ಇದೆ ಎಂದು ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ, ಶೌಚಾಲಯದ ಸಮಸ್ಯೆಯನ್ನು ಬಗೆಹರಿಸಬೇಕು. ಬೇಸಿಗೆಯು ಸಮೀಪಿಸುತ್ತಿರುವುದರಿಂದ ನೀರು ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.
ಆತ್ಮಹತ್ಯೆ ಮಾಡಿಕೊಂಡ ಮೃತ ರೈತರ ಕುಟುಂಬಕ್ಕೆ ತಲುಪಬೇಕಾದ ಪರಿಹಾರದ ಹಣ ಇನ್ನು ಕೆಲವರಿಗೆ ತಲುಪದೆ ಇರುವುದು ಕಂಡುಬಂದಿದೆ. ಹೀಗಾಗಿ ಅಧಿಕಾರಿಗಳು ಯಾವ ಕುಟುಂಬಕ್ಕೆ ಹಣ ಇನ್ನೂ ತಲುಪಿಲ್ಲ ಅಂತಹವರಿಗೆ ಶೀಘ್ರವಾಗಿ ಹಣ ಮಂಜೂರಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ಜಿಲ್ಲೆಯಲ್ಲಿ 2019ರ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 204 ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 580 ಕೆರೆಗಳು ಒತ್ತುವರಿಯಾಗಿದ್ದು, ಇದರಲ್ಲಿ 50 ಕೆರೆಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಉಳಿದವುಗಳನ್ನು ತೆರವುಗೊಳಿಸಲು ಭೂ ದಾಖಲೆಗಳ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







