ಬಿಹಾರದಲ್ಲಿ ಕನ್ಹಯ್ಯ ಕುಮಾರ್ ವಾಹನದ ಮೇಲೆ ಕಲ್ಲು ತೂರಾಟ

ಕನ್ಹಯ್ಯ ಕುಮಾರ್ (File Photo)
ಪಾಟ್ನಾ : ಪೌರತ್ವ ತಿದ್ದುಪಡಿ ಕಾಯಿದೆ, ಎನ್ಪಿಆರ್ ಹಾಗೂ ಎನ್ಆರ್ಸಿ ವಿರೋಧಿಸಿ ಬಿಹಾರ ರಾಜ್ಯಾದ್ಯಂತ ಪ್ರವಾಸದಲ್ಲಿರುವ ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರು ಸಂಚರಿಸುತ್ತಿದ್ದ ವಾಹನದ ಮೇಲೆ ಬಿಹಾರದ ಗಯಾ ಜಿಲ್ಲೆಯಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಕನ್ಹಯ್ಯ ಅವರು ಶೇರ್ಘಟಿ ಪಟ್ಟಣದಲ್ಲಿ ನಡೆಯಲಿದ್ದ ಪ್ರತಿಭಟನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಆಗಮಿಸಿದ್ದ ಒಂದು ಗುಂಪು ಕನ್ಹಯ್ಯ ಮತ್ತು ಅವರ ಜತೆ ಸಂಚರಿಸುತ್ತಿದ್ದವರ ವಾಹನಗಳತ್ತ ಕಲ್ಲೆಸೆದಿತ್ತು. ಈ ಸಂದರ್ಭ ಶಾಸಕ ಅವಧೇಶ್ ಕುಮಾರ್ ಸಿಂಗ್ ಅವರಿದ್ದ ವಾಹನದ ಗಾಜು ಒಡೆದಿದೆ.
ಜನ ಗಣ ಮನ ಯಾತ್ರೆ ಆಯೋಜಿಸಿದ್ದ ಎನ್ಪಿಆರ್-ಎನ್ಆರ್ಸಿ-ಸಿಎಎ ವಿರೋಧಿ ಜಂಟಿ ವೇದಿಕೆ ಈ ಕುರಿತಂತೆ ಪ್ರತಿಕ್ರಿಯಿಸಿ ಕಳೆದೆರಡು ವಾರಗಳ ಅವಧಿಯಲ್ಲಿ ಕನ್ಹಯ್ಯ ಗುರಿಯಾಗಿಸಿ ಇದು ನಡೆದ ಏಳನೇ ಇಂತಹ ದಾಳಿಯಾಗಿದೆ ಎಂದು ಹೇಳಿದೆಯಲ್ಲದೆ ಕಲ್ಲೆಸೆತ ನಡೆಸಿದವರು ಕೂಗಿದ ಘೋಷಣೆಗಳಿಂದ ಅವರು ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಅಂಟಿಕೊಂಡವರೆಂಬುದು ಸ್ಪಷ್ಟವಾಗುತ್ತದೆ ಎಂದಿದೆ.
ಇದಕ್ಕೂ ಮೊದಲು ಫೆಬ್ರವರಿ 1ರಂದು ಸರನ್ ಜಿಲ್ಲೆಯಲ್ಲಿ, ಫೆಬ್ರವರಿ 5ರಂದು ಸುಪೌಲ್ ಪಟ್ಟಣದಲ್ಲಿ ಅವರ ವಾಹನದ ಮೇಲೆ ಕಲ್ಲೆಸೆಯಲಾಗಿತ್ತು. ಈ ಘಟನೆಯಲ್ಲಿ ಇಬ್ಬರಿಗೆ ಗಾಯಗಳುಂಟಾಗಿದ್ದವು.







