ಕರ್ನಾಟಕ ಬಂದ್ ಕರೆಗೆ ವಾಹನ ಚಾಲಕರ ಬೆಂಬಲ

ಬೆಂಗಳೂರು, ಫೆ.12: ಡಾ.ಸರೋಜಿನಿ ಮಹಿಷಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಫೆ.13ರಂದು ಹಮ್ಮಿಕೊಂಡಿರುವ ಕರ್ನಾಟಕ ಬಂದ್‌ಗೆ ಅಖಿಲ ಕರ್ನಾಟಕ ಸಾರಥಿ ಸಂಘಟನೆಗಳ ಒಕ್ಕೂಟ(ಚಾಲಕರ)ವು ಬೆಂಬಲ ಸೂಚಿಸಿದೆ.
ಬುಧವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದರ್ಶ ಆಟೋ ಮತ್ತು ಟ್ಯಾಕ್ಸಿ ಸಂಘದ ಅಧ್ಯಕ್ಷ ಲಯನ್ ಎಂ.ಮಂಜುನಾಥ್, ಈ ಬಂದ್‌ಗೆ ರಾಜ್ಯದ 2 ಲಕ್ಷ ಆಟೋ ರಿಕ್ಷಾ, 1.50 ಲಕ್ಷ ಓಲಾ ಊಬರ್ ಟ್ಯಾಕ್ಸಿ ಅಥವಾ ಕ್ಯಾಬ್ ಗಳು, 25 ಸಾವಿರ ಮ್ಯಾಕ್ಸಿ ಕ್ಯಾಬ್ ಗಳು, 10 ಸಾವಿರ ಏರ್‌ಪೋರ್ಟ್ ಟ್ಯಾಕ್ಸಿಗಳು, 9 ಸಾವಿರ ಲಾರಿ ಸೇರಿದಂತೆ 6 ಲಕ್ಷಕ್ಕೂ ಹೆಚ್ಚು ವಾಹನಗಳ ಚಾಲಕರು ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಬಂದರೆ ರಾಜ್ಯ ಸರಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಉದ್ಯೋಗ ಹಾಗೂ ಕೇಂದ್ರ ಸರಕಾರ ಮತ್ತು ಖಾಸಗಿ ವಲಯಗಳಲ್ಲಿ ಎ ಗ್ರೇಡ್ ಉದ್ಯೋಗದಲ್ಲಿ ಶೇ.65ರಷ್ಟು, ಬಿ ಗ್ರೇಡ್ ಉದ್ಯೋಗದಲ್ಲಿ ಶೇ. 80ರಷ್ಟು ಮತ್ತು ಸಿ ಹಾಗೂ ಡಿ ಗ್ರೇಡ್ ಉದ್ಯೋಗದಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಉದ್ಯೋಗದಲ್ಲಿ ಮಿಸಲಾತಿ ದೊರೆಯಲಿದೆ ಎಂದು ತಿಳಿಸಿದರು.





