ಜನವರಿಯಲ್ಲಿ ಶೇ.7.59ಕ್ಕೇರಿದ ಚಿಲ್ಲರೆ ಹಣದುಬ್ಬರ: ಮೇ 2014ರಿಂದೀಚಿಗೆ ಗರಿಷ್ಠ ಮಟ್ಟ

ಹೊಸದಿಲ್ಲಿ, ಫೆ.12: ಜನವರಿ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7.59ಕ್ಕೇರಿದ್ದು,ಅದರ ಹಿಂದಿನ ತಿಂಗಳಲ್ಲಿ ಅದು ಶೇ.7.35ರಷ್ಟಿತ್ತು ಎಂದು ಬುಧವಾರ ಸರಕಾರವು ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತೋರಿಸಿವೆ. ಮೇ 2014ರಿಂದೀಚಿಗೆ ಇದು ಚಿಲ್ಲರೆ ಹಣದುಬ್ಬರದ ಗರಿಷ್ಠ ಮಟ್ಟವಾಗಿದೆ.
ಆಹಾರ ಸಾಮಗ್ರಿಗಳ ಬೆಲೆಗಳಲ್ಲಿ ಹೆಚ್ಚಳ ಜನವರಿಯಲ್ಲಿ ಮತ್ತೊಮ್ಮೆ ಚಿಲ್ಲರೆ ಹಣದುಬ್ಬರ ಏರಿಕೆಗೆ ಕಾರಣವಾಗಿದೆ. ಇದೇ ವೇಳೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶೇ.14.12ರಷ್ಟಿದ್ದ ಗ್ರಾಹಕ ಆಹಾರ ಬೆಲೆ ಹಣದುಬ್ಬರವು ಜನವರಿಯಲ್ಲಿ ಶೇ.13.63ಕ್ಕೆ ತಗ್ಗಿದೆ. ಡಿಸೆಂಬರ್‌ಗೆ ಹೋಲಿಸಿದರೆ ಜನವರಿಯಲ್ಲಿ ತರಕಾರಿಗಳು, ದ್ವಿದಳ ಧಾನ್ಯಗಳು ದುಬಾರಿಯಾಗಿವೆ.
ಸತತ ಎರಡನೇ ತಿಂಗಳಿಗೆ ಹಣದುಬ್ಬರ ದರವು ಆರ್‌ಬಿಐನ ಹಣಕಾಸು ನೀತಿ ಪರಾಮರ್ಶೆ ಸಮಿತಿಯು ನಿಗದಿಪಡಿಸಿದ ಮಿತಿಯನ್ನು ದಾಟಿದೆ. ಆರ್ಥಿಕತೆಯ ಮಂದಗತಿಯ ಹೊರತಾಗಿಯೂ ಆರ್‌ಬಿಐ ಕಳೆದ ವಾರ ತನ್ನ ರೆಪೊ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರಲಿಲ್ಲ.
ತನ್ಮಧ್ಯೆ ಸರಕಾರವು ಪ್ರತ್ಯೇಕವಾಗಿ ಬಿಡುಗಡೆಗೊಳಿಸಿದ ದತ್ತಾಂಶಗಳಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ತಯಾರಿಕೆ ಕ್ಷೇತ್ರದಲ್ಲಿ ಕುಸಿತದಿಂದಾಗಿ ಕೈಗಾರಿಕಾ ಉತ್ಪಾದನೆಯು ಶೇ.0.3ರಷ್ಟು ತಗ್ಗಿದೆ.





