ಅಬ್ಬರದ ದೇಶಪ್ರೇಮಕ್ಕೆ ಸೋಲು: ದಿಲ್ಲಿ ಫಲಿತಾಂಶದ ಬಗ್ಗೆ ಪ್ರೊ..ಮಹೇಶ್ ಚಂದ್ರಗುರು

ಮೈಸೂರು,ಫೆ.12: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಮೌನ ಅಭಿವೃದ್ಧಿ ಕ್ರಾಂತಿಯ ಮೂಲಕ ಮತದಾರರ ಹೃದಯವನ್ನು ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿರುವುದು ನಿಜಕ್ಕೂ ಸಂವಿಧಾನಾತ್ಮಕ ಆಶಯಗಳು ಮತ್ತು ಪ್ರಜ್ಞಾವಂತ ದಿಲ್ಲಿ ಜನತೆಯ ಗೆಲುವು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅಭಿಪ್ರಾಯಿಸಿದ್ದಾರೆ.
ಮೋದಿ, ಅಮಿತ್ ಶಾ ಬಳಗದ ಅಬ್ಬರದ ದೇಶಪ್ರೇಮ ದಿಲ್ಲಿ ಚುನಾವಣಾ ಫಲಿತಾಂಶದಿಂದ ಲೆಕ್ಕಕ್ಕಿಲ್ಲದಂತಾಗಿದೆ. ದೇಶವು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಬದಿಗೊತ್ತಿ ಪಾಕಿಸ್ತಾನವನ್ನು ದಮನಗೊಳಿಸುವುದಾಗಿ ಅಬ್ಬರಿಸಿ 2019ರ ಲೋಕಸಭಾ ಚುನಾವಣೆಯಲ್ಲಿ ಮೋಸದಿಂದ ಗೆಲುವು ಸಾಧಿಸಿದ ಮೋದಿ ಬಳಗಕ್ಕೆ ಮತದಾರರು ಸರಿಯಾದ ಉತ್ತರವನ್ನೇ ನೀಡಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ಚುನಾವಣೆಯು ದಿಲ್ಲಿ ಜನತೆಯ ಗೆಲುವು ಮತ್ತು ಅಭಿವೃದ್ಧಿಗೆ ಸಿಕ್ಕ ಗೆಲುವು ಎಂಬುದಾಗಿ ಕೇಜ್ರಿವಾಲ್ ಪ್ರತಿಕ್ರಿಯಿಸಿರುವುದು ಔಚಿತ್ಯಪೂರ್ಣವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೇಗಾದರೂ ಮಾಡಿ ಅಧಿಕಾರ ಗಳಿಸಬೇಕೆಂಬ ಹುನ್ನಾರ ನಡೆಸಿದ್ದ ಮೋ-ಶಾ ಬಳಗಕ್ಕೆ ಈ ಚುನಾವಣೆ ಎಲ್ಲ ಕಾಲಕ್ಕೂ ಎಲ್ಲ ಭಾರತೀಯರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ಅಬ್ಬರದ ಭಾಷಣಗಳಿಂದ ದೂರ ಉಳಿದು ದಿಲ್ಲಿ ನಾಗರಿಕರಿಗೆ ಕನಿಷ್ಟ ಅಗತ್ಯತೆಗಳ ಪೂರೈಕೆ, ಮೂಲ ಸೌಕರ್ಯಗಳ ಅಭಿವೃದ್ಧಿ, ಶಾಲೆಗಳಿಗೆ ಆಧುನಿಕತೆಯ ಸ್ಪರ್ಶ, ಮೊಹಲ್ಲಾಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ನಿರ್ವಹಣೆ, ಕಡಿಮೆ ದರದಲ್ಲಿ ಸುಧಾರಿತ ಸಾರಿಗೆ ಸೇವೆ, ನಾಗರೀಕರಿಗೆ ಉತ್ತಮ ಸುರಕ್ಷತೆ, ಪ್ರಜೆಗಳ ಜೀವನಮಟ್ಟ ಸುಧಾರಣೆ ಮೊದಲಾದ ಅಭಿವೃದ್ಧಿ ಕೇಂದ್ರಿತ ಸಾಧನೆಗಳನ್ನು ಮಾಡಿದ ಕೇಜ್ರಿವಾಲ್ ಬಳಗವನ್ನು ಮತದಾರರು ತುಂಬು ಹೃದಯದಿಂದ ಕೈಹಿಡಿದಿರುವುದು ಭಾರತದಲ್ಲಿ ಪ್ರಜಾಸತ್ತೆ ಮೂಲಭೂತವಾದಿಗಳಿಂದ ಸಾಯುವುದಿಲ್ಲವೆಂಬ ಆಶಾದಾಯಕ ನಂಬಿಕೆಯನ್ನು ಜನರಲ್ಲಿ ಮೂಡಿಸಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಲವಾರು ಹುನ್ನಾರಗಳನ್ನು ನಡೆಸಿ ದಿಲ್ಲಿ ಸರ್ಕಾರದ ವಿಚಾರದಲ್ಲಿ ಮಲತಾಯಿ ಧೋರಣೆಯನ್ನು ತಾಳಿ ಕೇಜ್ರಿವಾಲ್ ಒಬ್ಬ ಅಸಹಾಯಕ ಮುಖ್ಯಮಂತ್ರಿ ಎಂದು ಬಿಂಬಿಸಲು ಹೊರಟು ಚುನಾವಣೆಯಲ್ಲಿ ಘೋರ ಸೋಲನ್ನು ಅನುಭವಿಸಿದೆ. ಏಕಮುಖಿ ಮನಸ್ಥಿತಿಯ ಮೋ-ಶಾ ನೇತೃತ್ವದ ಸರ್ಕಾರದಿಂದ ಬಹುತ್ವದ ರಕ್ಷಣೆ ಮತ್ತು ಬಹುಜನರ ಸಬಲೀಕರಣ ಸಾಧ್ಯವಿಲ್ಲವೆಂಬ ಸ್ಪಷ್ಟ ಸಂದೇಶವನ್ನು ರಾಷ್ಟ್ರ ರಾಜಧಾನಿಯ ಮತದಾರರು ನೀಡಿದ್ದಾರೆ.
ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮೋದಿ ಬಳಗ ಒಂದರ ನಂತರ ಮತ್ತೊಂದರಂತೆ ಸೋಲನ್ನು ಅನುಭವಿಸುತ್ತಿರುವುದು ಪ್ರಾದೇಶಿಕ ಮಟ್ಟದಲ್ಲಿ ಚುನಾವಣೆಗಳನ್ನು ಪೊಳ್ಳು ಭರವಸೆಗಳ ಮೂಲಕ ಗೆಲ್ಲಿಸಿಕೊಡುವ ಶಕ್ತಿ ಮೋದಿ ಅವರಿಗೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇನ್ನಾದರೂ ಕಾಂಗ್ರೆಸ್, ಕಮ್ಯುನಿಷ್ಟರು, ಪ್ರಾದೇಶಿಕ ಪಕ್ಷಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮೊದಲಾದವರು ಸಿದ್ಧಾಂತದ ಆಧಾರದ ಮೇಲೆ ಒಗ್ಗೂಡಿ ಬಿಜೆಪಿ ವಿರುದ್ಧ ಏಕ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ನಿಲ್ಲಿಸಿ ರಾಜ್ಯಾಧಿಕಾರವನ್ನು ಪಡೆದು ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಗಳನ್ನು ರಕ್ಷಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಗಳಲ್ಲಿ ಠೇವಣಿಯನ್ನು ಕಳೆದುಕೊಂಡು ಭಾರಿ ಮುಜುಗರ ಅನುಭವಿಸಬೇಕಾಗುತ್ತದೆಂಬ ಅರಿವು ಬಿಜೆಪಿಯೇತರ ಪಕ್ಷಗಳಲ್ಲಿ ಮೂಡಬೇಕು ಎಂದು ತಿಳಿಸಿದರು.
ವ್ಯಕ್ತಿಗತ ನಾಯಕತ್ವಕ್ಕಿಂತ ಸೈದ್ಧಾಂತಿಕ ಬದ್ಧತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಮನ್ನಣೆ ನೀಡಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕು. ಇವರೆಲ್ಲರ ಆಶಯ 'ಎನ್‍ಡಿಎ ಹಠಾವೋ - ಭಾರತ ಬಚಾವೋ' ಆಗಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







