ಮೀಸಲಾತಿ ಬಗ್ಗೆ ಸುಪ್ರೀಂ ತೀರ್ಪು: ಹೋರಾಟಕ್ಕೆ ಸಜ್ಜಾಗಲು ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಕರೆ
ಬೆಂಗಳೂರು, ಫೆ. 12: ‘ಮೀಸಲಾತಿ ಮೂಲಭೂತ ಹಕ್ಕಲ್ಲ’ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ, ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಸಾಮಾಜಿಕ ನ್ಯಾಯ ಪರಿಕಲ್ಪನೆ ಉಳಿಸಲು ಎಸ್ಸಿ-ಎಸ್ಟಿ ನೌಕರರು ಹೋರಾಟಕ್ಕೆ ಸಜ್ಜಾಗಬೇಕೆಂದು ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಕರೆ ನೀಡಿದೆ.
ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ, ಈ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರಕಾರ ತಕ್ಷಣವೇ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲ ಕಾಯ್ದೆ-ಕಾನೂನುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸದಂತೆ ಸಂವಿಧಾನದ ಪರಿಚೇದ 9ರಡಿ ಸೇರ್ಪಡೆ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಪರಿಶಿಷ್ಟರ ಭಡ್ತಿ ಮೀಸಲಾತಿಗೆ ಸಂಬಂಧಿಸಿದ ತೀರ್ಪು ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರಿಗೆ ಆಘಾತ ಮತ್ತು ಅಚ್ಚರಿಯನ್ನುಂಟುಮಾಡಿದೆ. ಸಂವಿಧಾನದ 16(4), 16(4-ಎ) ಮತ್ತು 16(4ಬಿ) ಪರಿಚ್ಚೇದಗಳು ಎಸ್ಸಿ-ಎಸ್ಟಿ ವರ್ಗಕ್ಕೆ ಉದ್ಯೋಗದಲ್ಲಿ ಮೀಸಲಾತಿ ಮತ್ತು ಭಡ್ತಿ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಕಲ್ಪಿಸಿವೆ. ಆದಾಗ್ಯೂ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಕೋರ್ಟ್ ಹೇಳಿರುವುದು ದುರ್ಬಲರನ್ನು ಮತ್ತಷ್ಟು ದುರ್ಬಲರನ್ನಾಗಿಸಿದೆ. ಎಲ್ಲ ರಾಜಕೀಯ ಮುತ್ಸದ್ದಿಗಳು ಪಕ್ಷಬೇಧ ಮರೆತು ಸಮುದಾಯ ಮತ್ತು ಸಂವಿಧಾನದ ಉಳಿವಿಗಾಗಿ ಧ್ವನಿ ಎತ್ತಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







