ಗಣಿ ವ್ಯವಹಾರದಲ್ಲಿ ಅರಣ್ಯ ನಿಯಮಗಳ ಉಲ್ಲಂಘನೆ ಸಹಜ: ಸಚಿವ ಆನಂದ್ ಸಿಂಗ್

ಬೆಂಗಳೂರು, ಫೆ.12: ನಮ್ಮದು ಗಣಿ ವ್ಯವಹಾರದ ಕುಟುಂಬವಾಗಿರುವುದರಿಂದ, ಸಹಜವಾಗಿಯೇ ನನ್ನ ಮೇಲೆ ಅರಣ್ಯ ನಿಯಮಗಳ ಉಲ್ಲಂಘನೆ ಕುರಿತು ಪ್ರಕರಣಗಳು ದಾಖಲಾಗಿವೆ. ವಾಹನ ಇದ್ದವರ ಮೇಲೆ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳು ದಾಖಲಾಗುವುದಿಲ್ಲವೇ? ಅದೇ ರೀತಿ ಇದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬುಧವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮದು ಗಣಿಗಾರಿಕೆ ನಡೆಸುವ ಕುಟುಂಬ. ಹೀಗಾಗಿ ಸಣ್ಣಪುಟ್ಟ ಪ್ರಕರಣಗಳು ಇರುತ್ತವೆ. ಆದರೆ, ಅದರಿಂದ ಯಾರಿಗೂ ತೊಂದರೆ ಅಥವಾ ಹಾನಿಯಾಗುವುದಿಲ್ಲ. ಮುಖ್ಯಮಂತ್ರಿ ನನ್ನ ಮೇಲೆ ವಿಶ್ವಾಸವಿಟ್ಟು ನೀಡಿರುವ ಈ ಅರಣ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಆನಂದ್ ಸಿಂಗ್ ಹೇಳಿದರು.
ಮುಖ್ಯಮಂತ್ರಿಗೆ ಯಾವ ಶಾಸಕರು ಯಾವ ಖಾತೆಯನ್ನು ನಿರ್ವಹಿಸಲು ಸಮರ್ಥರಿದ್ದಾರೆ ಅನ್ನೋದು ಗೊತ್ತು. ಅದರಂತೆ, ಅವರು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಮೊದಲು ಆಹಾರ ಖಾತೆ ಕೊಟ್ಟಿದ್ದರೂ, ಇದೀಗ ಅದನ್ನು ಬದಲಾಯಿಸಿ ಅರಣ್ಯ ಇಲಾಖೆಯ ಜವಾವ್ದಾರಿ ವಹಿಸಿದ್ದಾರೆ ಎಂದು ಅವರು ಹೇಳಿದರು.
ನಾನು ಇಂತಹದ್ದೇ ಖಾತೆ ಬೇಕು ಅಥವಾ ಕೊಟ್ಟಿರುವ ಖಾತೆಯನ್ನು ಬದಲಾವಣೆ ಮಾಡಿಕೊಡಿ ಎಂದು ಮುಖ್ಯಮಂತ್ರಿ ಬಳಿ ಕೇಳಿಲ್ಲ. ಯಾವ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ ಎಂದಷ್ಟೇ ಹೇಳಿದ್ದೆ. ಈಗ ಕೊಟ್ಟಿರುವ ಖಾತೆ ಬದಲಾವಣೆಯಾಗುವುದಾಗಲಿ, ಹೆಚ್ಚುವರಿ ಖಾತೆ ಕೊಡುವುದರ ಬಗ್ಗೆಯಾಗಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಆನಂದ್ ಸಿಂಗ್ ತಿಳಿಸಿದರು.
ಪ್ರತ್ಯೇಕ ಜಿಲ್ಲೆ: ಹಿಂದೆ ಸರಿದಿಲ್ಲ
ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬ ನನ್ನ ಸಂಕಲ್ಪದಿಂದ ಹಿಂದಕ್ಕೆ ಸರಿದಿಲ್ಲ. ನನ್ನ ಜಿಲ್ಲೆಯ ಜನರಿಗೆ ಕೊಟ್ಟಿರುವ ಮಾತನ್ನು ನಾನು ಮರೆತಿಲ್ಲ, ಈಗಲೂ ಅದಕ್ಕೆ ಬದ್ಧವಾಗಿದ್ದೇನೆ. ವಿಜಯನಗರ ಹೊಸ ಜಿಲ್ಲೆಯಾಗಿ ರೂಪುಗೊಳ್ಳುವ ಸಮಯವು ಬರುತ್ತದೆ. ಮುಖ್ಯಮಂತ್ರಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ.
-ಆನಂದ್ ಸಿಂಗ್, ಅರಣ್ಯ ಸಚಿವ







