ಬರೋಡ ವಿರುದ್ಧ ಕರ್ನಾಟಕ ಆರಂಭಿಕ ಮೇಲುಗೈ
ಮಿಥುನ್,ಗೌತಮ್, ಕೃಷ್ಣ ಶಿಸ್ತುಬದ್ಧ ಬೌಲಿಂಗ್

ಬೆಂಗಳೂರು, ಫೆ.12: ಬೌಲರ್‌ಗಳ ಮೆರೆದಾಟಕ್ಕೆ ಸಾಕ್ಷಿಯಾದ ಬರೋಡ ವಿರುದ್ಧ ಬುಧವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿಯ 9ನೇ ಸುತ್ತಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ 80 ರನ್ ಮುನ್ನಡೆ ಪಡೆಯಲು ಯಶಸ್ವಿಯಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಒಂದೇ ದಿನದಲ್ಲಿ 17 ವಿಕೆಟ್‌ಗಳು ಪತನಗೊಂಡವು. ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿ ವರ್ತಿಸುತ್ತಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಬರೋಡ ಮೊದಲ ಇನಿಂಗ್ಸ್‌ನಲ್ಲಿ 33.5 ಓವರ್‌ಗಳಲ್ಲಿ ಕೇವಲ 85 ರನ್‌ಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ಕೂಡ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದು 52 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ. ವಿಕೆಟ್‌ಕೀಪರ್ ಶರತ್(ಔಟಾಗದೆ 19)ಬಾಲಂಗೋಚಿ ಮಿಥುನ್(9)ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನಿಂಗ್ಸ್ ಆರಂಭಿಸಿದ ಆರ್.ಸಮರ್ಥ್(11)ಹಾಗೂ ದೇವದತ್ತ ಪಡಿಕ್ಕಲ್(6)ತವರು ಮೈದಾನದಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಕೃಷ್ಣಮೂರ್ತಿ ಸಿದ್ದಾರ್ಥ್(29,72 ಎಸೆತ)ಹಾಗೂ ನಾಯಕ ಕರುಣ್ ನಾಯರ್(47, 75 ಎಸೆತ, 5 ಬೌಂಡರಿ)3ನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಈ ಜೋಡಿಯನ್ನು ಬರೋಡದ ಭಾರ್ಗವ ಭಟ್(2-67)ಬೇರ್ಪಡಿಸಿದರು. ಸಿದ್ದಾರ್ಥ್ 29 ರನ್ ಗಳಿಸಿ ಭಟ್‌ಗೆ ವಿಕೆಟ್ ಒಪ್ಪಿಸಿದರು. ಸಿದ್ದಾರ್ಥ್ ಔಟಾದ ಬೆನ್ನಿಗೆ ನಾಯಕ ಕರುಣ್ ಕೂಡ ವಿಕೆಟ್ ಒಪ್ಪಿಸಿದರು. ನಾಯಕನ ನಿರ್ಗಮನದ ಬಳಿಕ ಬಂದ ಪವನ್ ದೇಶಪಾಂಡೆ 15 ರನ್ ಗಳಿಸಲಷ್ಟೇ ಶಕ್ತರಾದರು. ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತಿದರು. ಆಗ ಕರ್ನಾಟಕದ ಸ್ಕೋರ್ 110ಕ್ಕೆ6.
ಕೃಷ್ಣಪ್ಪ ಗೌತಮ್(27) ಹಾಗೂ ಶರತ್ 7ನೇ ವಿಕೆಟ್‌ಗೆ 32 ರನ್ ಸೇರಿಸಿ ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ಸೋಪರಿಯಾ(3-40)ಗೌತಮ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಸೋಪರಿಯಾಗೆ ಸಾಥ್ ನೀಡಿದ ಭಟ್ ಹಾಗೂ ಅಭಿಮನ್ಯು ರಾಜ್‌ಪೂತ್(2-17)ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಟಾಸ್ ಜಯಿಸಿದ ಕರ್ನಾಟಕದ ನಾಯಕ ನಾಯರ್ ಬರೋಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಕರ್ನಾಟಕದ ಶಿಸ್ತುಬದ್ದ ಬೌಲಿಂಗ್‌ಗೆ ತತ್ತರಿಸಿದ ಬರೋಡ ಕೇವಲ 85 ರನ್‌ಗೆ ಮೊದಲ ಇನಿಂಗ್ಸ್ ಮುಗಿಸಿತು. ಬರೋಡದ ಪರ ಆರಂಭಿಕ ಆಟಗಾರ ಅಹ್ಮದ್‌ನೂರ್ ಪಠಾಣ್ (45, 83 ಎಸೆತ, 8 ಬೌಂಡರಿ)ಏಕಾಂಗಿ ಹೋರಾಟ ನೀಡಿದರು. ದೀಪಕ್ ಹೂಡ(20) ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಕೃನಾಲ್ ಪಾಂಡ್ಯ ಸಹಿತ ಐವರು ಬ್ಯಾಟ್ಸ್ ಮನ್‌ಗಳು ರನ್ ಖಾತೆ ತೆರೆಯಲು ವಿಫಲರಾದರು.
ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ಅಭಿಮನ್ಯು ಮಿಥುನ್(3-26, ಕೆ.ಗೌತಮ್(3-25)ತಲಾ ಮೂರು ವಿಕೆಟ್ ಪಡೆದರು. ದೀರ್ಘ ಸಮಯದ ಬಳಿಕ ತಂಡಕ್ಕೆ ವಾಪಸಾಗಿರುವ ಪ್ರಸಿದ್ಧ ಕೃಷ್ಣ ಕೇವಲ 7 ರನ್ ನೀಡಿ 2 ವಿಕೆಟ್ ಪಡೆದು ಗಮನ ಸೆಳೆದರು. ಗೋಪಾಲ್ 5 ಎಸೆತಗಳಲ್ಲಿ 4 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ‘‘ನಾವು ಇನ್ನೂ 30-40 ರನ್ ಸೇರಿಸಿದರೆ, ನಮ್ಮ ಮುನ್ನಡೆ 100ರಿಂದ 120ಕ್ಕೆ ಏರಲಿದೆ. ಹೊಸ ಚೆಂಡಿನಲ್ಲಿ ಆರಂಭದಲ್ಲೇ ವಿಕೆಟ್ ಪಡೆದರೆ ಬರೋಡ ಒತ್ತಡಕ್ಕೆ ಸಿಲುಕಲಿದೆ. ಪಂದ್ಯ ನಮ್ಮ ಕೈಯ್ಯಲಿದೆ’’ ಎಂದು ನಾಲ್ಕು ಎಸೆತಗಳಲ್ಲಿ ಮೂರು ವಿಕೆಟ್ ಉರುಳಿಸಿದ ಮಿಥುನ್ ಪ್ರತಿಕ್ರಿಯಿಸಿದರು.







